ಪುತ್ತೂರು: ಕರ್ನಾಟಕ ವಿಧಾನಸಭಾ ಚುನಾವಣೆ ಘೊಷಣೆಯಾದ ಹಿನ್ನಲೆಯಲ್ಲಿ ರೈತರು ಸೇರಿದಂತೆ ಎಲ್ಲರೂ ತಮ್ಮ ಪರವಾನಗಿಯುಳ್ಳ ಕೋವಿ/ಆಯುಧಗಳನ್ನು ಸಮೀಪದ ಠಾಣೆಯಲ್ಲಿ ಠೇವಣಿ ಇಡಬೇಕಾಗುವ ಆದೇಶ ರಾಜ್ಯದೆಲ್ಲೆಡೆ ಜ್ಯಾರಿಯಾಗಿದೆ. ಆದರೆ ದ.ಕ.ಜಿಲ್ಲಾಧಿಕಾರಿ ಮಾತ್ರ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಅದೇನೆಂದರೆ ಠೇವಣಿ ಇಡುವ ವಿಚಾರದಲ್ಲಿ ಕೆಲ ಸಡಿಲಿಕೆಯನ್ನು ಮಾಡಿದ್ದಾರೆ.
ಚುನಾವಣೆ ಸಂದರ್ಭ ಸಾರ್ವಜನಿಕ ಶಾಂತಿ ಮತ್ತು ಶಿಸ್ತುಪಾಲನಾ ಮುಂಜಾಗ್ರತ ಕ್ರಮವಾಗಿ ಶಸ್ತ್ರಾಸ್ತ್ರ ಠೇವಣಿಗೆ ಆದೇಶ ಹೊರಡಿಸಲಾಗುತ್ತದೆ. ಈ ನಿಟ್ಟಿನಲ್ಲಿ ಶಸ್ತ್ರಾಸ್ತ್ರ ಡೆಪಾಸಿಟ್ ಮಾಡುವಂತೆ ರಾಜ್ಯದಲ್ಲಿ ಆದೇಶ ಮಾಡಲಾಗಿದೆ. ಆದರೆ ಈ ಆದೇಶದಿಂದಾಗಿ ಬೆಳೆ ರಕ್ಷಣೆಗಾಗಿ ಕೋವಿಗಳನ್ನು ಹೊಂದಿರುವ ರೈತರಿಗೆ ತೊಂದರೆಯಾಗುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿಯೂ ಪ್ರಾರಂಭದಲ್ಲಿ ಜಿಲ್ಲಾಧಿಕಾರಿ ಈ ಆದೇಶವನ್ನು ಮಾಡಿದ್ದರು. ಆದರೆ ಆ ಬಳಿಕ ರೈತರಿಗೆ ಆಗುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ಹೀಗಾಗಿ ಇದೀಗ ಜಿಲ್ಲಾಧಿಕಾರಿಗಳು ರೈತರಿಗೆ ಸಿಹಿ ಸುದ್ದಿ ನೀಡಿದ್ದು, ಅಪರಾಧ ಹಿನ್ನಲೆ, ಜಾಮೀನಿನಲ್ಲಿ ಬಿಡುಗಡೆಯಾದವರು, ಈ ಹಿಂದೆ ಚುನಾವಣೆ ಸಂದರ್ಭದಲ್ಲಿ ದೊಂಬಿ ಗಲಾಟೆಯಲ್ಲಿ ಭಾಗಿಯಾದವರನ್ನು ಹೊರತುಪಡಿಸಿ ಉಳಿದ ರೈತರಿಗೆ ಶಸ್ತ್ರಾಸ್ತ್ರ ಠೇವಣಿಯಲ್ಲಿ ವಿನಾಯಿತಿ ನೀಡಿದ್ದಾರೆ.
ಶಸ್ತ್ರಾಸ್ತ್ರ ಕಾಯ್ದೆಯಡಿ ಪರವಾನಿಗೆದಾರರಿಗೆ ಬೆಳೆ ರಕ್ಷಣೆಗಾಗಿ ಶಸ್ತ್ರಾಸ್ತ್ರದ ಅವಶ್ಯಕತೆ ಇದ್ದರೆ ಪೂರಕ ದಾಖಲೆಗಳೊಂದಿಗೆ ತಾಲೂಕು ತಹಶೀಲ್ದಾರರಿಗೆ ಅಹವಾಲುಗಳನ್ನು ಸಲ್ಲಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದಕ್ಕಾಗಿ ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿ ಸ್ಕ್ರೀನಿಂಗ್ ಸಮಿತಿಗಳನ್ನು ರಚಿಸಲಾಗಿದ್ದು,ಈ ಸಮಿತಿಗಳಲ್ಲಿ ತಹಶೀಲ್ದಾರ್, ಪೊಲೀಸ್ ಉಪನಿರೀಕ್ಷಕರು, ವಲಯ ಅರಣ್ಯಾಧಿಕಾರಿ, ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ಇರಲಿದ್ದಾರೆ.
ಕಡಬ, ಸುಳ್ಯ, ಪುತ್ತೂರು, ಬೆಳ್ತಂಗಡಿಯಂತಹ ಪ್ರದೇಶದಗಳಲ್ಲಿ ಕಾಡು ಪ್ರದೇಶ ಹೆಚ್ಚಾಗಿದ್ದು, ಆನೆ, ಮಂಗ ಕಾಡುಹಂದಿ, ಹಾಗೂ ಇತರ ಕಾಡುಪ್ರಾಣಿಗಳು ಉಪಟಳ ಜಾಸ್ತಿ ಇದ್ದು ಕಡಬದ ಮೀನಾಡಿಯಲ್ಲಿ ರಂಜಿತಾ ಹಾಗೂ ರಮೇಶ್ ಆನೆ ದಾಳಿ ನಡೆಸಿ ಜೀವ ತೆಗೆದಿತ್ತು. ಈ ಎಲ್ಲ ಸಮಸ್ಯೆಗಳು ಗ್ರಾಮ ವಾಸ್ತವ್ಯದ ಸಂದರ್ಭ ಜಿಲ್ಲಾಧಿಕಾರಿಗಳ ಅರಿವಿಗೆ ಬಂದಿತ್ತು. ಇದೀಗ ಜಿಲ್ಲಾಧಿಕಾರಿಗಳ ಈ ಆದೇಶದಿಂದ ರೈತರು ಫುಲ್ ಖುಷಿಯಾಗಿದ್ದಾರೆ.