ದೇಶದ ಭವಿಷ್ಯ ತರಗತಿ ಕೋಣೆಯಲ್ಲಿ ರೂಪುಗೊಳ್ಳುತ್ತದೆ. ಇಂಥ ಭವಿಷ್ಯದ ಪ್ರಜೆಗಳನ್ನು ರೂಪಿಸುವ ಹೊಣೆ ಹೊತ್ತ ಶಿಕ್ಷಕನ ಜವಾಬ್ದಾರಿ ಬಹಳ ದೊಡ್ಡದು. ಆದರ್ಶ ಶಿಕ್ಷಕನಿಂದ ಮಾತ್ರ ಉತ್ತಮ ಪ್ರಜೆಗಳನ್ನು ರೂಪಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ಪಾಠ ಮಾಡಲು ತರಗತಿ ಕೋಣೆಯೊಳಗೆ ಕಾಲಿಡುವ ಮೊದಲು ಪ್ರತಿಯೊಬ್ಬ ಶಿಕ್ಷಕ ಮಾಡಿಕೊಳ್ಳಬೇಕಾದ ಸಂಕಲ್ಪ ಇದು…
1) ನನ್ನ ಶಾಲೆ ನನಗೆ ದೇವಸ್ಥಾನ. ನಾನು ಅದನ್ನು ಅಷ್ಟೇ ಪಾವಿತ್ರ್ಯದ ಭಾವನೆಯಿಂದ ನೋಡುತ್ತೇನೆ.
2) ಶಿಕ್ಷಕ ವೃತ್ತಿ ಬೇರೆ ವೃತ್ತಿಗಳ ಹಾಗೆ ಅಲ್ಲ. ನನ್ನ ವೃತ್ತಿ ಧರ್ಮವನ್ನು ಕಾಪಾಡಿಕೊಂಡು ಬರುವುದು ನನ್ನ ಜವಾಬ್ದಾರಿ.
3) ಗುರು ಎಂದರೆ ಭಾರವಾದದ್ದು ಎಂದರ್ಥ. ನನ್ನ ವೃತ್ತಿಯ ಘನತೆಯನ್ನು ಕಾಪಾಡುವುದು ನನ್ನ ಕರ್ತವ್ಯ.
4) ನನ್ನ ವಿದ್ಯಾರ್ಥಿಗಳನ್ನು ತಾರತಮ್ಯ ಇಲ್ಲದೆ ಪ್ರೀತಿಸುವುದು ನನ್ನ ಸಂಕಲ್ಪ. ಜಾತಿ, ಮತ, ಪಂಥ, ಲಿಂಗ, ಭಾಷೆಗಳ ಬಂಧನವಿಲ್ಲದೆ ನನ್ನ ಮಕ್ಕಳನ್ನು ನಾನು ಮುಖವಾಡ ಇಲ್ಲದೆ ಪ್ರೀತಿ ಮಾಡಬೇಕು.
5) ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧ ಮಾಡುವುದಕ್ಕಿಂತ ಬದುಕಿಗೆ ಸಿದ್ಧ ಮಾಡುವುದು ನನಗೆ ಮುಖ್ಯ.
6) ನನ್ನ ಪಾಠವನ್ನು ಹೆಚ್ಚು ಆಕರ್ಷಣೀಯವಾಗಿ ಮತ್ತು ಸೃಜನಾತ್ಮಕವಾಗಿ ಮಾಡಲು ನನ್ನ ಪ್ರಯತ್ನ ನಿರಂತರ ಜಾರಿಯಲ್ಲಿ ಇರುತ್ತದೆ.
7) ಜೀವನ ಮೌಲ್ಯಗಳನ್ನು ಬೋಧನೆ ಮಾಡುವುದಕ್ಕಿಂತ ನಾನು ಸ್ವತಃ ಮೌಲ್ಯವಾಗುವುದು ಮುಖ್ಯ.
8) ನನ್ನ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳು ಕೇವಲ ದಾರಿಯ ದೀಪಗಳು. ಅವುಗಳೇ ಸರ್ವಸ್ವ ಅಲ್ಲ. ನನ್ನ ವಿದ್ಯಾರ್ಥಿಗಳು
ಪಠ್ಯಪುಸ್ತಕಗಳಿಗಿಂತ ಹೊರಗಿನ ಜ್ಞಾನವನ್ನು ಕೂಡ ಪಡೆಯಬೇಕು.
9) ಪ್ರತಿ ವಿದ್ಯಾರ್ಥಿ ಒಂದಲ್ಲ ಒಂದು ಪ್ರತಿಭೆಯನ್ನು ಪಡೆದು ಈ ಜಗತ್ತಿಗೆ ಬಂದಿರುತ್ತಾನೆ. ಅದನ್ನು ಗುರುತಿಸಿ ಅದಕ್ಕೆ ಸೂಕ್ತವಾದ ತರಬೇತಿ ಮತ್ತು ವೇದಿಕೆಗಳನ್ನು ಕಲ್ಪಿಸುವುದು ನನ್ನ ಹೊಣೆ.
10) ನನ್ನ ವಿದ್ಯಾರ್ಥಿಗಳ ಪೋಷಕರ ಜತೆ ಉತ್ತಮವಾದ ಸಂಬಂಧಗಳನ್ನು ಪೋಷಣೆ ಮಾಡುವುದು ನನ್ನ ಕರ್ತವ್ಯದ ಭಾಗ. ಈ ಸಂಬಂಧದ ಉದ್ದೇಶವು ವಿದ್ಯಾರ್ಥಿಯ ಕ್ಷೇಮಪಾಲನೆಯೇ ಆಗಿರುತ್ತದೆ. ಈ ಸಂಬಂಧವು ಯಾವ ಕಾಲಕ್ಕೂ ವ್ಯಾವಹಾರಿಕ ಆಗಿರಬಾರದು.
11) ನನ್ನ ಸಹೋದ್ಯೋಗಿಗಳ ಜತೆ ನನ್ನ ಸಂಬಂಧ ಅತ್ಯಂತ ಹಾರ್ದಿಕ ಆಗಿರಬೇಕು. ನನ್ನ ಸ್ಟಾಫ್ ರೂಮ್ ನನಗೆ ಪ್ರೇರಣೆ ಕೊಡುವ ತಾಣ ಆಗಿರುತ್ತದೆ.
12) ವಿದ್ಯಾರ್ಥಿಗಳ ಪರೀಕ್ಷೆಗಳ ಅಂಕಗಳು ಮಕ್ಕಳ ಬುದ್ಧಿವಂತಿಕೆಯನ್ನು ಪರೀಕ್ಷೆ ಮಾಡುವುದಕ್ಕಿಂತ ನನ್ನ ಬೋಧನಾ ಸಾಮರ್ಥ್ಯದ ಮಾನದಂಡ ಆಗಿರುತ್ತದೆ ಎಂದು ನಂಬಿದ್ದೇನೆ.
13) ಮಕ್ಕಳ ವರ್ತನೆಯಲ್ಲಿ ಅನುದ್ದೇಶಿತ ತಪ್ಪುಗಳು ಇದ್ದಾಗ ಅವುಗಳನ್ನು ಪ್ರೀತಿಯಿಂದ ತಿದ್ದುವುದು ನನ್ನ ಹೊಣೆ.
14) ವಿದ್ಯಾರ್ಥಿಗಳಿಗೆ ನನ್ನ ಮೇಲಿರುವ ನಂಬಿಕೆ ಮತ್ತು ಪ್ರೀತಿ ಅವರನ್ನು ಕಲಿಯುವಂತೆ ಪ್ರೇರಣೆ ನೀಡುತ್ತವೆ ಎಂದು ನನಗೆ ಗೊತ್ತಿದೆ.
15) ವಿದ್ಯಾರ್ಥಿಗಳು ಕೇಳುವ ಪ್ರತಿ ಪ್ರಶ್ನೆ ಕುತೂಹಲದ ಪ್ರತಿಬಿಂಬ ಆಗಿರುತ್ತದೆ. ಅವುಗಳಿಗೆ ಉತ್ತರಿಸುವುದು ನನ್ನ ಕರ್ತವ್ಯ.
16) ಸಾಮಾಜಿಕ ಜಾಲತಾಣಗಳಲ್ಲಿ ಕಳೆದುಹೋಗುತ್ತಿರುವ ನನ್ನ ವಿದ್ಯಾರ್ಥಿಗಳನ್ನು ಮತ್ತೆ ಪುಸ್ತಕಗಳ ಕಡೆಗೆ ಸೆಳೆಯುವುದು ನನ್ನ ಹೊಣೆ. ಈ ದಿಸೆಯಲ್ಲಿ ನನ್ನ ನಿರಂತರ ಪ್ರಯತ್ನ ಜಾರಿಯಲ್ಲಿರುತ್ತದೆ.
17) ಶಾಲೆಯ ಆಡಳಿತ ಮಂಡಳಿಯ/ ಇಲಾಖೆಯ ನಿರ್ದೇಶನಗಳನ್ನು ಪಾಲಿಸಲು ನಾನು ಬದ್ಧನಾಗಿದ್ದೇನೆ.
18) ಮಕ್ಕಳ ಪಠ್ಯಪೂರಕ ಚಟವಟಿಕೆಗಳಿಗೆ ಅವಕಾಶ ಮತ್ತು ಪ್ರೋತ್ಸಾಹ ನೀಡುವುದು ನನ್ನ ಬದ್ಧತೆ.
19) ಮಕ್ಕಳಲ್ಲಿ ನಾಯಕತ್ವದ ಗುಣಗಳು, ಸ್ವಾವಲಂಬನೆ, ಸ್ವಾಭಿಮಾನ, ಸತ್ಯನಿಷ್ಠೆ, ನಂಬಿಕೆ, ಜೀವನೋತ್ಸಾಹ, ಕುತೂಹಲ ಮೊದಲಾದವುಗಳನ್ನು ಪೋಷಣೆ ಮಾಡುವುದು ನನ್ನ ಕರ್ತವ್ಯ.
20) ಬೋಧನಾ ವಿಧಾನ(ಲೆಕ್ಚರ್ ಮೆಥಡ್)ದಲ್ಲಿ ಪಾಠ ಮಾಡುವುದಕ್ಕಿಂತ ಚಟುವಟಿಕೆ ಆಧಾರಿತ (ಆಕ್ಟಿವಿಟಿ) ತರಗತಿಗಳನ್ನು ಖಾತರಿ ಮಾಡುವುದು ನನ್ನ ಕರ್ತವ್ಯ.
21) ಸಿದ್ಧತೆ ಮಾಡದೆ ನಾನು ತರಗತಿಗೆ ಹೋಗುವುದಿಲ್ಲ. ಎಷ್ಟೇ ವರ್ಷ ಅನುಭವ ಆದರೂ ಸಿದ್ಧತೆ ಮುಖ್ಯ.
22) ಶಾಲೆಯ ಹೊರಗಡೆ ನಾನು ಎಷ್ಟೇ ದೊಡ್ಡ ಸಾಧಕನಾಗಿ ಇದ್ದರೂ ಶಾಲೆಯ ಒಳಗೆ ಬರುವಾಗ ನಾನೊಬ್ಬ ಸಾಮಾನ್ಯ ಶಿಕ್ಷಕನಾಗಿ ಬರುವುದು ಮುಖ್ಯ. ಆದರೂ ನನ್ನ ಇತರ ಸಾಧನೆಗಳು ನನ್ನ ವಿದ್ಯಾರ್ಥಿಗಳಿಗೆ ಪ್ರೇರಣೆ ಕೊಡುವ ಶಕ್ತಿ ಹೊಂದಿವೆ ಎಂದು ನನಗೆ ಗೊತ್ತಿದೆ.
23) ನನ್ನ ಸಾಧನೆಗಳನ್ನು ನಾನೇ ತರಗತಿಯಲ್ಲಿ ಹೇಳಿಕೊಳ್ಳುವುದು ನನ್ನ ವಿದ್ಯಾರ್ಥಿಗಳಿಗೆ ಇಷ್ಟ ಆಗುವುದಿಲ್ಲ.
24) ಯಾವುದೇ ಪಾಠಗಳನ್ನು ಪ್ಯಾಷನ್ ಮತ್ತು ಭಾವನೆಗಳ ಜತೆಗೆ ಮಾಡುವುದು ನನ್ನ ಕರ್ತವ್ಯ.
25) ನನ್ನ ತರಗತಿಗಳಲ್ಲಿ ವಿದ್ಯಾರ್ಥಿಗಳ ನಡುವೆ ಉತ್ತಮ ಸಂಬಂಧಗಳನ್ನು ಪೋಷಣೆ ಮಾಡುವುದು ನನ್ನ ಆದ್ಯತೆ. ಹುಡುಗ ಮತ್ತು ಹುಡುಗಿಯರ ನಡುವೆ ಕೂಡ ಸಕಾರಾತ್ಮಕ ಸಂವಹನಕ್ಕೆ ನಾನು ಅವಕಾಶ ನೀಡಬೇಕು.
26) ನನ್ನ ತರಗತಿಯಲ್ಲಿ ತಪ್ಪು ಸಂದೇಶ, ತಪ್ಪು ಮಾಹಿತಿ ನುಸುಳದ ಹಾಗೆ ನಾನು ಎಚ್ಚರವಹಿಸಬೇಕು.
✒️ರಾಜೇಂದ್ರ ಭಟ್
ರಾಷ್ಟ್ರೀಯ ತರಬೇತುದಾರ