ಪುತ್ತೂರು: ಸಮಾಜದಲ್ಲಿ ಶೇಕಡಾ 80ರಷ್ಟು ಜನ ಒಂದಲ್ಲ ಒಂದು ರೀತಿಯ ಹಲ್ಲಿನ ಸಮಸ್ಯೆಯಿಂದ ಬಳಲುತ್ತಾರೆ. ಆದರೆ ಅದು ತೀವ್ರತೆಯ ಮಟ್ಟಕ್ಕೆ ತಲಪುವವರೆಗೆ ಸುಮ್ಮನಿರುತ್ತಾರೆ ಎಂದು ಸುಳ್ಯದ ಕೆವಿಜಿ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯ ಡಾ.ಅರವಿಂದ್ ಹೇಳಿದರು.
ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎನ್ಎಸ್ಎಸ್ ಹಾಗೂ ಯೂತ್ ರೆಡ್ ಕ್ರಾಸ್ ಘಟಕ, ರೋಟರಿ ಕ್ಲಬ್ ಪುತ್ತೂರು ಪೂರ್ವ ಮತ್ತು ಸುಳ್ಯದ ಕೆವಿಜಿ ದಂತ ವೈದ್ಯಕೀಯ ಕಾಲೇಜು ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ದಂತ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಲ್ಲರೂ ಪ್ರತಿ 6 ತಿಂಗಳಿಗೊಮ್ಮೆ ತಮ್ಮ ಹಲ್ಲುಗಳನ್ನು ಪರೀಕ್ಷಿಸಿಕೊಳ್ಳಬೇಕು. ಇದರಿಂದ ಹಲ್ಲುಗಳು ಹಾಳಾಗುವುದನ್ನು ತಪ್ಪಿಸುವುದರ ಜತೆಯಲ್ಲಿ ಹಲ್ಲುಗಳನ್ನು ಬಹುಕಾಲ ರಕ್ಷಿಸಬಹುದು ಎಂದರು.
ರೋಟರಿ ಕ್ಲಬ್ ಪುತ್ತೂರು ಪೂರ್ವ ಇದರ ಅಧ್ಯಕ್ಷ ಶರತ್ ಕುಮಾರ್ ರೈ ಮಾತನಾಡಿ, ರೋಟರಿ ಸಂಸ್ಥೆಯು ಸಮಾಜಮುಖೀ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಮಾಜದ ಮತ್ತು ಜನತೆಯ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ನಿರತವಾಗಿದೆ ಎಂದ ಅವರು, ವಿದ್ಯಾರ್ಥಿಗಳೆಲ್ಲರೂ ಜನಮಾನಸದ ಒಳಿತಿಗಾಗಿ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ರೋಟರಿ ಸಂಸ್ಥೆಯ ಝೋನಲ್ ಲೆಫ್ಟಿನೆಂಟ್ ಪುರಂದರ ರೈ ಮಾತನಾಡಿ, ರೋಟರಿಯು ಪ್ರಪಂಚದ ಅತ್ಯಂತ ದೊಡ್ಡ ಸೇವಾ ಸಂಸ್ಥೆ. ಇದರ ಮೂಲಕ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು ಇಂದಿನ ಶಿಬಿರವೂ ಇದರ ಒಂದು ಅಂಗವಾಗಿದೆ. ಎಳೆಯರಿಗೇಕೆ ದಂತ ಚಿಕಿತ್ಸಾ ಶಿಬಿರ ಎನ್ನುವ ಪ್ರಶ್ನೆಯು ಉದ್ಭವಿಸಬಹುದು. ಆದರೆ ನಿಯಮಿತವಾದ ತಪಾಸಣೆಯು ಮುಂಬರುವ ದೊಡ್ಡ ತೊಂದರೆಗಳನ್ನು ತಪ್ಪಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಇಂಜಿನಿಯರಿಂಗ್ ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ ಡಿ ಕಲ್ಲಾಜೆ ಮಾತನಾಡಿ, ವಿದ್ಯಾರ್ಥಿಗಳ ಏಳಿಗೆಗಾಗಿ ಕಾಲೇಜು ಅನೇಕ ಚಟುವಟಿಕೆಗಳನ್ನು ನಡೆಸುತ್ತಿದೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲದೆ ಸ್ವಾಸ್ಥ್ಯವನ್ನು ಕಾಪಾಡುವ ಇಂತಹ ಆರೋಗ್ಯ ಶಿಬಿರಗಳನ್ನೂ ಸಂಘಟಿಸುತ್ತದೆ ಎಂದರು.
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥ ಡಾ. ಮನುಜೇಶ್ ಬಿ.ಜೆ. ಸ್ವಾಗತಿಸಿ, ರಚನಾ ವಂದಿಸಿದರು. ದೀಪಕ್ ಕಾರ್ಯಕ್ರಮ ನಿರೂಪಿಸಿದರು.