ಪುತ್ತೂರು: ಇತ್ತೀಚೆಗೆ ನಿಧನರಾದ ಕುದ್ಮಾರು ಶಾಲಾ ನಿವೃತ್ತ ಮುಖ್ಯ ಶಿಕ್ಷಕ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಮದನ ಪೂಜಾರಿ ಅವರಿಗೆ ಶ್ರದ್ಧಾಂಜಲಿ ಸಭೆ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ಶಾಂತಿಮೊಗರು ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸೀತಾರಾಮ ರೈ ಸವಣೂರು ಮಾತನಾಡಿ, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಅಭಿವೃದ್ಧಿಯಲ್ಲಿ ಮದನ ಪೂಜಾರಿಯವರ ಪಾತ್ರ ಮಹತ್ತರ. ಜತೆಗೆ ತನ್ನ ಶಿಷ್ಯರನ್ನು ದೇವಸ್ಥಾನದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದಾರೆ. ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಬೇಕೆಂದು ಪಣತೊಟ್ಟ ಅವರು ಆ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯದರ್ಶಿಯಾಗಿ ಮುನ್ನಡೆಸಿದ್ದರು ಎಂದು ಹೇಳಿದ ಅವರು. ಪ್ರಾಮಾಣಿಕತೆಯೊಂದಿಗೆ ಎಲ್ಲವನ್ನೂ ನಿಭಾಯಿಸುವ ಅವರ ಚಾಕಚಕ್ಯತೆ ಮೆಚ್ಚುವಂತದ್ದು. ಕುದ್ಮಾರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳಿಗೆ ವಿದ್ಯೆ ಕಲಿಸುವ ಜತೆಗೆ ಅವರನ್ನು ಸಂಸ್ಕಾರಯುತರನ್ನಾಗಿ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು ಎಂದು.
ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ಹುಟ್ಟು ಸಾವಿನ ನಡುವಿನ ಬದುಕನ್ನು ಹೇಗೆ ಅರ್ಥಪೂರ್ಣವಾಗಿ ಸವೆಸಿದೆ ಎಂಬುದೇ ಆ ವ್ಯಕ್ತಿಯ ಜೀವನ. ತಮಗೆ ಕೊಟ್ಟ ಜವಾಬ್ದಾರಿಯನ್ನು ಚಾಚೂ ತಪ್ಪದೆ ನಿಭಾಯಿಸಿ, ಕರ್ತವ್ಯ ನಿಷ್ಠೆ ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಮದನ ಪೂಜಾರಿ. ಅವರ ಅಗಲುವಿಕೆ ದುಃಖದ ವಿಚಾರ ಎಂದರು.
ಸುಳ್ಯ ಅಕ್ರಮ-ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಶೂರಪ್ಪ ಗೌಡ ಪಟ್ಟೆತ್ತಾನ, ವಸಂತ ಗೌಡ ಬೆಳ್ತಂಗಡಿ, ಆಲಂಕಾರು ಮುರ್ತೆದಾರರ ಸೇವಾ ಸಹಕಾರಿ ಸಂಘದ ನಿರ್ದೇಶಕ ಚಂದ್ರಶೇಖರ ಕೆ., ಮಾತನಾಡಿದರು.
ಈ ಸಂದರ್ಭದಲ್ಲಿ ಮದನ ಪೂಜಾರಿ ಅವರ ಪತ್ನಿ ಭವಾನಿ, ಪುತ್ರರಾದ ರೋಶನ್, ಪ್ರಶಾನ್, ಪುತ್ರಿ ವಂದನ, ಸೊಸೆಯಂದಿರಾದ ಅಮಿತ, ಮಾನಸ, ಅಳಿಯ ಸೀತಾರಾಮ್, ಮೊಮ್ಮಕ್ಕಳಾದ ಸಾಯಿನಿಶಾನ್, ಇಶಾನ್, ಆದ್ಯನಿಧಿ, ವಿಹಾನ್ ಮತ್ತಿತರರು ಉಪಸ್ಥಿತರಿದ್ದರು. ದೇವಸ್ಥಾನದ ಅನುವಂಶೀಯ ಮೊಕ್ತೇಸರ ಪ್ರವೀಣ್ ಕುಮಾರ್ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.