ಪುತ್ತೂರು: ಬಹುಬೇಡಿಕೆಯ, ಬಹುನಿರೀಕ್ಷಿತ ಜಿಎಲ್ ವನ್ ಮಾಲ್ ಏ. 2ರಂದು ಲೋಕಾರ್ಪಣೆಗೊಂಡಿತು.
ಜಿಎಲ್ ಸಮೂಹ ಸಂಸ್ಥೆಗಳ ಕೊಡುಗೆಯಾಗಿರುವ ಜಿಎಲ್ ವನ್ ಮಾಲ್ ನ ಲೋಗೋವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅನಾವರಣಗೊಳಿಸಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಅವರು ಮಾಲ್ ಅನ್ನು ಲೋಕಾರ್ಪಣೆಗೊಳಿಸಿದರು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ದೀಪಪ್ರಜ್ವಲನೆ ಮಾಡಿ, ಮಾಲ್ ಅನ್ನು ಲೋಕಾರ್ಪಣೆಗೊಳಿಸಿದರು.
ನಂಬರ್ ವನ್ ಆಗಿಯೇ ಇರಲಿ: ಎಡನೀರು ಶ್ರೀ
ಆಶೀರ್ವಚನ ನೀಡಿದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರ, ಆಚರಣೆಗಳ ತಳಹದಿಯಲ್ಲಿ ಯಾವುದೇ ಹೊಸ ಪರಿಕಲ್ಪನೆಗಳು ಬಂದರೂ ಸ್ವಾಗತವೇ. ಆದರೆ ನಮ್ಮತನವನ್ನು ನಾವು ಕಳೆದುಕೊಳ್ಳಬಾರದು. ಇಂತಹ ಪರಿಕಲ್ಪನೆಯಡಿ ಜಿಎಲ್ ಬಲರಾಮ ಆಚಾರ್ಯ ಮತ್ತವರ ತಂಡ, ಜಿಎಲ್ ವನ್ ಮಾಲ್ ಅನ್ನು ಪುತ್ತೂರಿಗೆ ನೀಡಿದ್ದಾರೆ. ನಂಬರ್ ವನ್ ಎಂಬ ಸ್ಪರ್ಧೆ ನಮಗಿಲ್ಲ ಎಂದು ಬಲರಾಮ ಆಚಾರ್ಯರು ಹೇಳಿದರೂ, ಈ ಮಾಲ್ ಸದಾ ನಂಬರ್ ವನ್ ಸ್ಥಾನದಲ್ಲೇ ಇರಲಿ ಎಂದು ಶುಭಹಾರೈಸಿದರು.
ಅಭಿವೃದ್ಧಿಗೆ ತಕ್ಕಂತೆ ಇದೆ ಮಾಲ್: ಹರ್ಷೇಂದ್ರ ಕುಮಾರ್
ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಮಾತನಾಡಿ, ಯಕ್ಷಗಾನದ ವಿಚಾರದಲ್ಲಿ ಆಗಾಗ ಪುತ್ತೂರಿಗೆ ಬರುತ್ತಿದೆ. ಯಕ್ಷಗಾನ ಕಾಲಮಿತಿ ಆದ ಬಳಿಕ ಪುತ್ತೂರಿಗೆ ಬರುವ ಅವಕಾಶ ಕಡಿಮೆಯಾಗಿದೆ. ಆಗಿನ ಪುತ್ತೂರಿಗೂ – ಈಗಿನ ಪುತ್ತೂರಿಗೂ ಬಹಳ ವ್ಯತ್ಯಾಸವಿದೆ, ಅಭಿವೃದ್ಧಿಯಾಗಿದೆ. ಇಲ್ಲಿನ ವ್ಯಾಪಾರಿಗಳು, ಊರವರು ಪುತ್ತೂರನ್ನು ಸೌಹಾರ್ದತೆಯಿಂದ ಬಹಳ ಚೆನ್ನಾಗಿ ಅಭಿವೃದ್ಧಿ ಮಾಡಿದ್ದಾರೆ. ಇಂತಹ ಪೊಟೆನ್ಷಿಯಲ್ ಇರುವ ಪುತ್ತೂರಿಗೆ ತಕ್ಕಂತೆ ಮಾಲ್ ಅನ್ನು ಜಿಎಲ್ ಸಮೂಹ ಸಂಸ್ಥೆಗಳು ನೀಡಿದೆ ಎಂದರು.
ವ್ಯಾಪಾರಿಗೆ ಗ್ರಾಹಕನೇ ದೇವರು: ಡಾ. ಕಲ್ಲಡ್ಕ ಪ್ರಭಾಕರ ಭಟ್
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಮಾಲ್ ಕಲ್ಪನೆ ವಿದೇಶದ್ದು. ದೇಶದೊಳಗಡೆ ಪ್ರವೇಶಿಸುತ್ತಿದ್ದಂತೆ ದೇಶದ ರಾಜಧಾನಿಯಲ್ಲಿ ಮೊದಲು ಆರಂಭವಾಯಿತು. ನಂತರ ಮಹಾನಗರಗಳಲ್ಲಿ ಸ್ಥಾಪನೆಗೊಂಡು, ಇದೀಗ ಪುಟ್ಟ ಊರು ಪುತ್ತೂರಿನಲ್ಲೂ ಆರಂಭಗೊಂಡಿದೆ. ಗುಣಮಟ್ಟದಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ಜಿಎಲ್ ಸಮೂಹ ಸಂಸ್ಥೆಗಳು ಜಿಎಲ್ ವನ್ ಮಾಲ್ ಅನ್ನು ಪುತ್ತೂರಿಗೆ ನೀಡಿದ್ದಾರೆ. ಜನರು ಜಿಎಲ್ ಸಮೂಹ ಸಂಸ್ಥೆಗಳ ಮೇಲೆ ನಂಬಿಕೆ ಇಟ್ಟಿದ್ದಾರೆ. ಅದು ಇಲ್ಲೂ ಮುಂದುವರಿಯಲಿದೆ ಎಂದು ಆಶಿಸಿದರು.
ಸಿಂದೂ ನದಿ ಸೇರಿದ ಸಮುದ್ರವನ್ನು ಇಂದು ಅರಬ್ಬೀ ಸಮುದ್ರ ಎಂದು ಕರೆಯುತ್ತಾರೆ. ಬ್ರಿಟಿಷರು ಹೇಳಿದರು ಎಂದು ನಾವು ಅದನ್ನೇ ಅನುಸರಿಸುತ್ತಿದ್ದೇವೆ. ಇದು ಸರಿಯಲ್ಲ. ಸಿಂದೂ ನದಿಯ ಪಾವಿತ್ರ್ಯತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅದರಂತೆ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ಹೊಸ ಪರಿಕಲ್ಪನೆ ಬಂದಾಗ ಕಳೆದುಕೊಳ್ಳಬಾರದು. ನಮ್ಮತನವನ್ನು ಉಳಿಸಿಕೊಂಡು, ಹೊಸ ಪರಿಕಲ್ಪನೆಗೆ ಸ್ವಾಗತ ನೀಡುವುದು ಉತ್ತಮ ವಿಚಾರ. ಪರಿವರ್ತನೆ ಎಂದರೆ ಪ್ರಗತಿಯತ್ತ ಹೋಗುವುದು ಎಂದರ್ಥ ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮಾಲ್ ಎನ್ನುವುದು ಕಾನ್ಸೆಪ್ಟ್: ಬಲರಾಮ ಆಚಾರ್ಯ
ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಜಿಎಲ್ ವನ್ ಮಾಲ್ ನ ಛೇರ್ ಮೆನ್ ಬಲರಾಮ ಆಚಾರ್ಯ, ನಮ್ಮ ಊರಿಗೆ ತಕ್ಕನಾಗಿ ಜಿಎಲ್ ವನ್ ಮಾಲ್ ಅನ್ನು ನಿರ್ಮಾಣ ಮಾಡಲಾಗಿದೆ. ನಮ್ಮ ಸಂಸ್ಕೃತಿ, ಆಚರಣೆಗಳಿಗೆ ಇಲ್ಲಿ ಏನೂ ಕುಂದುಂಟಾಗದು. ನಮ್ಮ ಊರಿನಲ್ಲಿ ಎಲ್ಲಾ ಮೂಲಸೌಕರ್ಯಗಳು ಸಿಗಬೇಕು ಎನ್ನುವ ದೃಷ್ಟಿಯಿಂದ ಮಾಲ್ ಅನ್ನು ನಿರ್ಮಾಣ ಮಾಡಲಾಗಿದೆ. ಇದರಿಂದ ಯುವಕರು ಊರು ಬಿಟ್ಟು, ಪಟ್ಟಣ ಸೇರುವುದನ್ನು ತಪ್ಪಿಸಬಹುದು. ಆದ್ದರಿಂದ ಮಾಲ್ ಎಂದರೆ ಕಲ್ಚರ್ ಅಲ್ಲ, ಬದಲಾಗಿ ಮಾಲ್ ಎಂದರೆ ಕಾನ್ಸೆಪ್ಟ್ ಎಂದರು.
ಇದೇ ಸಂದರ್ಭ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸಂದೇಶವನ್ನು ಓದಿ ಹೇಳಲಾಯಿತು.
ಭಾರತ್ ಸಿನಿಮಾದ ಛೇರ್ ಮೆನ್ ಆನಂದ್ ಪೈ, ಬಿಂದು ಸಮೂಹ ಸಂಸ್ಥೆಗಳ ಛೇರ್ ಮೆನ್ ಸತ್ಯಶಂಕರ್, ಪುತ್ತೂರು ವಾಣಿಜ್ಯ ಸಂಘದ ಅಧ್ಯಕ್ಷ ಜಾನ್ ಕುಟಿನ್ಹಾ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.
ಪುತ್ತೂರು ಜಮಾತ್ ಕಮಿಟಿ ಅಧ್ಯಕ್ಷ ಎಲ್.ಟಿ. ಅಬ್ದುಲ್ ರಜಾಕ್, ಸಂಸ್ಥೆಯ ನಿರ್ದೇಶಕ ಲಕ್ಷ್ಮೀಕಾಂತ್ ಆಚಾರ್ಯ, ರಾಜೀ ಬಲರಾಮ್ ಉಪಸ್ಥಿತರಿದ್ದರು. ಜಿಎಲ್ ವನ್ ಮಾಲ್ ನ ನಿರ್ದೇಶಕ ಸುಧನ್ವ ಆಚಾರ್ಯ ವಂದಿಸಿದರು.