ಚಾರಿಟಿಯಲ್ಲಿಯೂ ಅವರು ಎಲ್ಲರಿಗಿಂತ ಮುಂದೆ
ಭಾರತದ ಮಹೋನ್ನತ ಬಿಸಿನೆಸ್ ಮ್ಯಾಗ್ನೆಟ್ ರತನ್ ಟಾಟಾ ಪ್ರಧಾನಮಂತ್ರಿಗಳ ಕೊರೊನ ತುರ್ತು ಪರಿಹಾರ ನಿಧಿಗೆ 1500 ಕೋಟಿ ರೂ. ಕೊಡುಗೆ ನೀಡಿದಾಗ ಎಲ್ಲರೂ ಮೂಗಿನ ಮೇಲೆ ಬೆರಳು ಇಟ್ಟಿದ್ದರು. ಎಷ್ಟೋ ಸಿರಿವಂತರು ಹೃದಯವಂತರು ಆಗಿರುವುದಿಲ್ಲ. ಆದರೆ ರತನ್ ಟಾಟಾ ಅದಕ್ಕೊಂದು ಅಪವಾದ. ಅವರು ತಮ್ಮ ಸಂಪತ್ತಿನ ಶೇ.60-65 ಭಾಗವನ್ನು ಈಗಾಗಲೇ ದಾನ ಮಾಡಿಯಾಗಿದೆ. ಬೇರೆ ಕಾರ್ಪೊರೇಟ್ ಕಂಪೆನಿಗಳು ತಮ್ಮ ಸಿಎಸ್ಆರ್ ಯೋಜನೆಗಳನ್ನು ರೂಪಿಸಲು ಕೂಡ ರತನ್ ಟಾಟಾ ಮಾದರಿಯಾಗಿ ನಿಂತಿದ್ದಾರೆ.
ಟಾಟಾ ಕಂಪೆನಿಗೆ ಒಬ್ಬ ಸಾಮಾನ್ಯ ಉದ್ಯೋಗಿಯಾಗಿ ಸೇರಿದರು
1937ರಲ್ಲಿ ಸೂರತ್ ನಗರದಲ್ಲಿ ಜನಿಸಿದ ರತನ್ ಟಾಟಾ ವಿದೇಶಗಳಲ್ಲಿ ಶಿಕ್ಷಣ ಪಡೆದವರು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕಲಿಕೆ. 1961ರಲ್ಲಿ ಟಾಟಾ ಕಂಪನಿಯನ್ನು ಒಬ್ಬ ಸಾಮಾನ್ಯ ಉದ್ಯೋಗಿಯಾಗಿ ಸೇರಿದ ಅವರು ತಮ್ಮ ಕಾರ್ಯಕ್ಷಮತೆ, ಶಿಸ್ತು ಮತ್ತು ದಕ್ಷತೆಯಿಂದ ಎಲ್ಲರ ಮನಗೆದ್ದರು. 1991ರಲ್ಲಿ ಟಾಟಾ ಸಮೂಹ ಸಂಸ್ಥೆಗಳ ಭೀಷ್ಮ ಜೆ.ಆರ್.ಡಿ. ಟಾಟಾ ಅವರು ಅಧ್ಯಕ್ಷ ಹುದ್ದೆಯಿಂದ ನಿವೃತ್ತರಾಗುವಾಗ ತನ್ನ ಉತ್ತರಾಧಿಕಾರಿಯಾಗಿ ರತನ್ ಟಾಟಾ ಅವರನ್ನು ನೇಮಕ ಮಾಡಿದರು. ಇದು ಟಾಟಾ ವಿವಿಧ ಕಂಪನಿಗಳ ಮುಖ್ಯಸ್ಥರ ಅಸಮಾಧಾನಕ್ಕೆ ಕಾರಣವಾಯಿತು. ಆದರೆ ರತನ್ ಟಾಟಾ ಇದಕ್ಕೆಲ್ಲ ಸೊಪ್ಪು ಹಾಕುವವರೇ ಅಲ್ಲ. ಎಲ್ಲ ಟಾಟಾ ಸಂಸ್ಥೆಗಳನ್ನು ಒಗ್ಗೂಡಿಸಿ ಟಾಟಾ ಸಮೂಹ ಸಂಸ್ಥೆಯಾಗಿ ರೂಪಿಸಿದ್ದು ಅವರ ಜಾಣ ನಡೆಯಾಗಿತ್ತು. ಹಿರಿಯ ತಲೆಗಳನ್ನು ನಿವೃತ್ತಿ ಮಾಡಿ ಹೊಸಬರಿಗೆ ಅವಕಾಶ ನೀಡಿದರು. ಹೊಸ ಆವಿಷ್ಕಾರ, ನಾವೀನ್ಯತೆ, ಜಾಗತಿಕ ದೃಷ್ಟಿಕೋನ, ಆರ್ಥಿಕ ಶಿಸ್ತು, ಪರಿಣಾಮಕಾರಿ ನಿರ್ಧಾರ, ಉತ್ತರದಾಯಿತ್ವ, ಜವಾಬ್ದಾರಿಗಳ ಹಂಚಿಕೆ ಇವುಗಳಿಗೆ ಆದ್ಯತೆ ನೀಡಿದರು. ಆರ್ಥಿಕ ಶಿಸ್ತು ಅವರಲ್ಲಿ ಎದ್ದು ಕಾಣುವ ಗುಣ. ತನ್ನ ಉದ್ಯೋಗಿಗಳನ್ನು ತುಂಬಾ ಚೆನ್ನಾಗಿ ವಿಶ್ವಾಸಕ್ಕೆ ತೆಗೆದುಕೊಂಡರು. ಪರಿಣಾಮವಾಗಿ ಅವರ 21 ವರ್ಷಗಳ ಅಧಿಕಾರದ ಅವಧಿಯಲ್ಲಿ ಟಾಟಾ ಸಂಸ್ಥೆಯ ಆದಾಯವು 40 ಪಟ್ಟು ಅಧಿಕವಾಯಿತು. ಲಾಭವು 50 ಪಟ್ಟು ಅಧಿಕವಾಯಿತು. ರತನ್ ಟಾಟಾ ಅವರ ಅವಧಿಯನ್ನು ಭಾರತೀಯ ಉದ್ಯಮ ರಂಗದ ಸುವರ್ಣ ಯುಗ ಎಂದು ಕರೆಯಲಾಯಿತು.
ಟಾಟಾ ಜಗದಗಲ ಬೆಳೆಯಿತು
ಟಾಟಾ ಸಂಸ್ಥೆಗಳು 100ಕ್ಕೂ ಅಧಿಕ ದೇಶಗಳಲ್ಲಿ ಸ್ಥಾಪನೆಯಾದವು. ಗುಂಡು ಪಿನ್‌ನಿಂದ ಆರಂಭಿಸಿ ಟ್ರಕ್‌ಗಳವರೆಗೆ, ಉಪ್ಪಿನಿಂದ ಆರಂಭಿಸಿ ವಿಮಾನದವರೆಗೆ, ಕೈಗಡಿಯಾರದಿಂದ ಆರಂಭಿಸಿ ಚಿನ್ನದ ಮಳಿಗೆಗಳವರೆಗೆ, ಹೋಟೆಲ್ ಉದ್ಯಮದಿಂದ ಆರಂಭ ಮಾಡಿ ನ್ಯಾನೋ ಕಾರುಗಳವರೆಗೆ ಉದ್ಯಮವನ್ನು ವಿಸ್ತಾರ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಬೆಳೆಯುತ್ತಿರುವ ಹಲವು ಉದ್ಯಮಿಗಳಿಗೆ ಅವರು ತಮ್ಮ ಗೆಲುವಿನ ಗುಟ್ಟನ್ನು ಯಾವ ಮುಚ್ಚುಮರೆ ಇಲ್ಲದೆ ತಿಳಿಸುತ್ತಾರೆ. ಹೀಗಾಗಿ ಟಾಟಾ ಇಂದು ಉದ್ಯಮರಂಗದ ಗುರು ಎಂದು ಕೂಡ ಕರೆಸಿಕೊಂಡಿದ್ದಾರೆ.
ಕೊಟ್ಟ ಮಾತಿನಂತೆ ನಡೆದುಕೊಂಡರು ರತನ್ ಟಾಟಾ
75ನೇ ವಯಸ್ಸಿನಲ್ಲಿ ಅವರು ತಾವು ಕೊಟ್ಟ ಮಾತಿನಂತೆ ಸೇವಾ ನಿವೃತ್ತಿಯನ್ನು ಘೋಷಿಸಿ ತನ್ನ ಉತ್ತರಾಧಿಕಾರಿಯನ್ನು ನೇಮಿಸಿದರು. ಆದರೆ ಆಡಳಿತ ಮಂಡಳಿ, ಶೇರ್ ಹೋಲ್ಡರ್ಸ್, ಸಹಯೋಗಿ ಸಂಸ್ಥೆಗಳು ಅವರ ಮೇಲೆ ಪೂರ್ತಿ ಭರವಸೆ ಇಟ್ಟು ಅವರನ್ನೇ ಟಾಟಾ ಸಂಸ್ಥೆಗಳು ಹಾಗೂ ಟ್ರಸ್ಟ್‌ಗಳ ಹೆಡ್ ಆಗಿ ಇಂದಿಗೂ ಮುಂದುವರಿಸಿಕೊಂಡು ಬಂದಿವೆ. ಸಂಸ್ಥೆಗಳ ಲಾಭದ ಶೇ.51ಗಿಂತ ಅಧಿಕ ಪಾಲನ್ನು ಅವರು ಟಾಟಾ ಸಮಾಜ ಸೇವಾ ಟ್ರಸ್ಟ್‌ಗಳಿಗೆ ಹಂಚಿಕೆ ಮಾಡುತ್ತಾರೆ. ತಾನು ಕೇವಲ ಶೇ.1ಕ್ಕಿಂತ ಕಡಿಮೆ ಲಾಭವನ್ನು ಪಡೆಯುತ್ತಾರೆ. ಅವರಿಗೆ ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳು ಈಗಾಗಲೇ ದೊರೆತಿದ್ದು ಭಾರತರತ್ನ ಮಾತ್ರ ಬಾಕಿಯಿದೆ. ನೊಂದವರ, ಬಡವರ ಬಗ್ಗೆ ಕಾಳಜಿ ಅವರಿಗೆ ರಕ್ತದಲ್ಲೇ ಬಂದಿದ್ದು ಜಗತ್ತಿನ ಅತಿ ಕಡಿಮೆ ಬೆಲೆಯ ಟಾಟಾ ನ್ಯಾನೊ ಬಡವರ ಕಾರು(ಬೆಲೆ ಕೇವಲ ಒಂದು ಲಕ್ಷ ರೂಪಾಯಿ) ರೂಪಿಸಿದ ಕೀರ್ತಿ ಅವರದ್ದು. ಬೀದಿನಾಯಿಗಳನ್ನು ಪೋಷಣೆ ಮಾಡುವುದರಲ್ಲಿ ಕೂಡ ಅವರು ಮಾದರಿ ಆಗಿದ್ದಾರೆ. ಒಮ್ಮೆ ತನ್ನ ಬೀದಿನಾಯಿಗಳ ಅನಾರೋಗ್ಯದ ಕಾರಣಕ್ಕೆ ಇಂಗ್ಲೆಂಡ್ ಅರಮನೆಯ ಅದ್ದೂರಿ ಸನ್ಮಾನ ನಿರಾಕರಿಸಿ ಅವರು ಭಾರಿ ಸುದ್ದಿಯಾಗಿದ್ದರು.
ರತನ್ ಟಾಟಾ ಎಲ್ಲರಂತಲ್ಲ!
ಸಂಪೂರ್ಣ ಸಸ್ಯಾಹಾರಿ ಆದ, ಮದ್ಯಪಾನದಿಂದ ಗಾವುದ ದೂರ ಇರುವ, ನಾಚಿಕೆ ಸ್ವಭಾವದ, ಹೆಚ್ಚು ಏಕಾಂತವನ್ನು ಬಯಸುವ, ಸಾಮಾಜಿಕ ಕಾರ್ಯಕ್ರಮಗಳಿಗೆ ಕಡಿಮೆ ಬರುವ, ಪ್ರಚಾರದಿಂದ ದೂರ ಇರುವ, ಪಿಯಾನೊ ನುಡಿಸುವ, ಹಳೆ ಹಿಂದಿ ಸಿನಿಮಾ ಗೀತೆಗಳನ್ನು ಗುನುಗುವ, ಸರಳವಾಗಿ ಬದುಕುತ್ತಿರುವ, ಬೀದಿನಾಯಿಗಳನ್ನು ಪೋಷಿಸುವ, ತುಂಬಾ ಓದುವ ಅಭ್ಯಾಸವಿರುವ ರತನ್ ಟಾಟಾ ಅವರಿಗೆ ಈಗ 85 ವರ್ಷ. ಕೊರೊನ ಸಂದರ್ಭದಲ್ಲಿ ಬೇರೆಲ್ಲ ಕಂಪನಿಗಳು ಉದ್ಯೋಗಳಿಗೆ ವೇತನ ಕಡಿತ ಮಾಡಿದ್ದರೆ ಟಾಟಾ ಕಂಪನಿ ಪೂರ್ಣ ವೇತನ ಕೊಟ್ಟು ಮಾದರಿ ಆಗಿತ್ತು.
ಜೀವನದಲ್ಲಿ 4 ಹುಡುಗಿಯರನ್ನು ಪ್ರೀತಿ ಮಾಡಿದ್ದೆ ಎಂದು ಹೇಳಿಕೊಳ್ಳುವ ಅವರಿನ್ನೂ ಮದುವೆಯಾಗಿಲ್ಲ!
✒️ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು.