ಪುತ್ತೂರು: ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಜೀವಿನಿ ಕಟ್ಟಡ ಹಾಗೂ ರಾಜೀವ್ ಗಾಂಧಿ ಸೇವಾ ಕೇಂದ್ರದ ಕಟ್ಟಡಕ್ಕೆ ಶಾಸಕ ಸಂಜೀವ ಮಠಂದೂರು ಅವರು ಡಿ. 17ರಂದು ಶಂಕುಸ್ಥಾಪನೆ ನೆರವೇರಿಸಿದರು. ಇದೇ ಸಂದರ್ಭ ವಸತಿ ಯೋಜನೆ, ನರೇಗಾ ಯೋಜನೆ ಸೇರಿದಂತೆ ವಿವಿಧ ಯೋಜನೆಯ ಫಲಾನುಭವಿಗಳಿಗೆ ಚೆಕ್ ಹಾಗೂ ಸೌಲಭ್ಯ ವಿತರಿಸಲಾಯಿತು.
ಬಳಿಕ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಗ್ರಾಮ ಪಂಚಾಯತ್ ಮಟ್ಟದಲ್ಲೇ ಜನರಿಗೆ ಸೌಲಭ್ಯ ನೀಡುವ ಕೆಲಸ ಆಗುತ್ತಿದೆ. ಅದರಲ್ಲೂ ಮಹಿಳೆಯರ ಕೆಲಸಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಜೊತೆಗೆ, ಉದ್ಯೋಗ ಸೃಷ್ಟಿ, ಕುಡಿಯುವ ನೀರಿಗಾಗಿ ಅನುದಾನ, ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ, ನಿವೇಶನ ಶಾಲೆಗಳಿಗೆ ಶುದ್ಧಿ ಕುಡಿಯುವ ನೀರಿನ ಘಟಕ, ಸ್ಮಾರ್ಟ್ ಕ್ಲಾಸಿಗೆ ಬೆಂಚ್ – ಡೆಸ್ಕ್ ನೀಡಲಾಗುತ್ತಿದೆ ಎಂದರು.
ತಾ.ಪಂ. ಸಹಾಯಕ ನಿದೇಶಕಿ ಶೈಲಜಾ ಭಟ್ ಅವರು ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಸಂಜೀವಿನಿ ಒಕ್ಕೂಟದ ಸದಸ್ಯ ಗೀತಾ ಪ್ರಾರ್ಥಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೌಮ್ಯ ಸ್ವಾಗತಿಸಿ, ಗ್ರಾ.ಪಂ. ಉಪಾಧ್ಯಕ್ಷ ವಿನೋದ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.