ನೀವು ಅಡ್ಮಿನ್ ಆಗಿದ್ದರೆ ಎಚ್ಚರಿಕೆ ವಹಿಸಿಕೊಳ್ಳಿ
ಬೆಂಗಳೂರು : ರಾಜ್ಯದಲ್ಲಿ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸೋಷಿಯಲ್ ಮೀಡಿಯಾ ಸೇರಿದಂತೆ ಎಲ್ಲ ರೀತಿಯ ಪ್ರಚಾರ ಮಾಧ್ಯಮಗಳ ಮೇಲೆ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಸುದ್ದಿಪತ್ರಿಕೆಗಳು, ಸಾಮಾಜಿಕ ಜಾಲತಾಣಗಳು ಮತ್ತು ಇನ್ನಿತರ ಮೂಲಗಳಿಂದ ರಾಜಕೀಯ ಪ್ರಚಾರ ಮಾಡಬೇಕಿದ್ದಲ್ಲಿ ಮತ್ತು ರಾಜಕೀಯ ಪ್ರೇರಿತ ಹೇಳಿಕೆ ನೀಡಬೇಕಾದರೆ ಚುನಾವಣಾ ಸಂಬಂಧ ನೇಮಕ ಮಾಡಲಾಗಿರುವ ಸಮಿತಿಯಿಂದ ಪೂರ್ವ ಅನುಮತಿ ಪಡೆಯುವುದು ಕಡ್ಡಾಯ. ವಾಟ್ಸಪ್, ಫೇಸ್‌ಬುಕ್ ಮತ್ತಿತರ ಸೋಷಿಯಲ್ ಮೀಡಿಯಾ ಗ್ರೂಪ್‌ಗಳಿಗೂ ಈ ನಿಯಮ ಅನ್ವಯವಾಗುತ್ತದೆ. ಹೀಗಾಗಿ ವಾಟ್ಸಪ್ ಅಥವಾ ಫೇಸ್‌ಬುಕ್‌ನಲ್ಲಿ ರಾಜಕೀಯ ವಿಚಾರ ಬರೆಯುವಾಗ, ಬಂದ ಪೋಸ್ಟ್‌ಗಳನ್ನು ಹಂಚಿಕೊಳ್ಳುವಾಗ ಅದು ರಾಜಕೀಯ ಹಿತಾಸಕ್ತಿ ಹೊಂದಿದೆಯಾ ಎಂದು ನೋಡಿಕೊಳ್ಳುವುದು ಅಗತ್ಯ. ನಿಯಮ ಉಲ್ಲಂಘನೆ ಮಾಡಿ ರಾಜಕೀಯ ಟೀಕೆಗಳನ್ನು ಹಂಚಿಕೊಂಡ ಕೆಲವು ವಾಟ್ಸಪ್ ಗ್ರೂಪ್‌ಗಳಿಗೆ ಈಗಾಗಲೇ ನೋಟಿಸ್ ಜಾರಿಯಾಗಿದೆ. ನಮ್ಮ ಕುಶಾಲನಗರ ವಾಟ್ಸಪ್ ಗ್ರೂಪ್‌ಗೆ ಚುನಾವಣಾಧಿಕಾರಿ ಕಳುಹಿಸಿರುವ ನೋಟಿಸ್ ವೈರಲ್ ಆಗಿದೆ.
ಈ ರೀತಿ ವಾಟ್ಸಪ್ ಗ್ರೂಪ್‌ಗಳಿಗೆ ಚುನಾವಣಾ ಅಧಿಕಾರಿಗಳು ನೋಟಿಸ್ ಕಳುಹಿಸುವುದು ಇದೇ ಮೊದಲಲ್ಲ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ವಿವಿಧ ರಾಜ್ಯಗಳಲ್ಲಿ ಹಲವು ವಾಟ್ಸಪ್ ಗ್ರೂಪ್‌ಗಳಿಗೆ ನೋಟಿಸ್ ಕಳುಹಿಸಲಾಗಿತ್ತು. ಸೂಕ್ತ ಸ್ಪಷ್ಟನೆ ನೀಡದ ಅಡ್ಮಿನ್‌ಗಳ ಮೇಲೆ ಕ್ರಮ ಜರುಗಿಸಲಾಗಿತ್ತು.
ಕರ್ನಾಟಕದಲ್ಲಿ ಮತದಾನ ದಿನಾಂಕ ಘೋಷಣೆಯಾದ ಬಳಿಕ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಮುದ್ರಣ ಮಾಧ್ಯಮಗಳು ಮತ್ತು ಟೀವಿ ಮಾಧ್ಯಮಗಳ ಮೇಲೆ ಆಯೋಗ ಕಣ್ಣಿಟ್ಟಿದೆ. ಇದೀಗ ಈ ವ್ಯಾಪ್ತಿಯಲ್ಲಿ ವಾಟ್ಸಪ್ ಗ್ರೂಪ್‌ಗಳ ಮೇಲೂ ಆಯೋಗದ ಅಧಿಕಾರಿಗಳು ಕಣ್ಣಿಟ್ಟಿದ್ದು, ನೀತಿ ಸಂಹಿತೆ ಉಲ್ಲಂಘಿಸಿದವರಿಗೆ ಕಾರಣ ಕೇಳಿ ನೋಟಿಸ್ ಬರುತ್ತಿದೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ನಮ್ಮ ಕುಶಾಲನಗರ ಗ್ರೂಪ್‌ಗೆ ನೋಟಿಸ್ ಕಳುಹಿಸಿದ್ದಾರೆ. ʼನೀವು ಅಡ್ಡಿನ್ ಆಗಿರುವ ನಮ್ಮ ಕುಶಾಲನಗರ ವಾಟ್ಸಪ್ ಗ್ರೂಪ್‌ನ ಮೂಲಕ ಪೂರ್ವ ಆನುಮತಿ ಪಡೆಯದೆ ರಾಜಕೀಯ ಪ್ರೇರಿತ ಹೇಳಿಕೆಯ ವೀಡಿಯೋ ತುಣುಕನ್ನು ಹಂಚಿಕೊಂಡಿರುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿರುತ್ತದೆʼ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಅಡಿಯಲ್ಲಿ ನಿಮ್ಮ ಮೇಲೆ ಏಕೆ ಕಾನೂನು ಕ್ರಮ ಜರುಗಿಸಬಾರದು ಎಂಬುದಕ್ಕೆ ಈ ನೋಟಿಸ್ ತಲುಪಿದ 24 ಗಂಟೆಯೊಳಗಾಗಿ ಖುದ್ದು ಲಿಖಿತ ಸಮಜಾಯಿಷಿ ನೀಡಲು ಸೂಚಿಸಿದೆ. ತಪ್ಪಿದಲ್ಲಿ ನಿಮ್ಮ ಸಮಜಾಯಿಷಿ ಏನು ಇಲ್ಲವೆಂದು ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರ ಮತ್ತು ಉಪವಿಭಾಗಾಧಿಕಾರಿಯವರು ನೋಟಿಸ್ ಕಳುಹಿಸಿದ್ದಾರೆ.
ಮಾದರಿ ನೀತಿ ಸಂಹಿತೆಯು ಜಾರಿಯಲ್ಲಿರುವ ಸಂದರ್ಭ ಪತ್ರಿಕೆ, ಮಾದ್ಯಮ, ಸಾಮಾಜಿಕ ಜಾಲತಾಣ ಹಾಗೂ ಇನ್ನಿತರ ಮೂಲಗಳಿಂದ ಯಾವುದೇ ರಾಜಕೀಯ ಪ್ರಚಾರ ಮಾಡಬೇಕಾದಲ್ಲಿ ಮತ್ತು ರಾಜಕೀಯ ಪ್ರೇರಿತ ಹೇಳಿಕೆ ನೀಡಬೇಕಾದಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ನೇಮಕ ಮಾಡಲಾಗಿರುವ District Media Certification and Monitoring Committe ಯಿಂದ ಪೂರ್ವ ಅನುಮತಿ ಪಡೆಯಬೇಕಾಗಿರುತ್ತದೆ ಎಂಬ ಎಚ್ಚರಿಕೆಯ ಸಂದೇಶವೂ ನೋಟಿಸ್‌ನಲ್ಲಿದೆ.
ಈಗಾಗಲೇ ಹಲವು ವಾಟ್ಸಪ್ ಗ್ರೂಪ್‌ಗಳಿಗೆ ಇಂತಹ ನೋಟಿಸ್ ಬಂದಿದೆ ಎನ್ನಲಾಗಿದೆ. ಹೀಗಾಗಿ ವಾಟ್ಸಪ್ ಗ್ರೂಪ್ ಹೊಂದಿರುವವರು ಎಚ್ಚರಿಕೆಯಿಂದ ಇರುವುದು ಉತ್ತಮ.
ವಾಟ್ಸಪ್ ಅಡ್ಮಿನ್‌ಗಳು ವಹಿಸಬೇಕಾದ ಮುನ್ನೆಚ್ಚರಿಕೆ
*ಅನಗತ್ಯವಾಗಿ ಹಲವು ವಾಟ್ಸಪ್ ಗ್ರೂಪ್‌ಗಳನ್ನು ರಚಿಸಬೇಡಿ. ನೀವು ಅಡ್ಮಿನ್ ಆಗಿರುವ ಗ್ರೂಪ್‌ಗಳು ಯಾವುವು ಎಂದು ನೆನಪಿಸಿಕೊಳ್ಳಿ. ಅಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿರಿ.
*ಯಾವುದೇ ರೀತಿಯ ಚುನಾವಣಾ ಪ್ರಚಾರ ಸಂದೇಶಗಳನ್ನು ಕಳುಹಿಸದಂತೆ ಗುಂಪಿನ ಸದಸ್ಯರಿಗೆ ಎಚ್ಚರಿಸಿ.
*ಚುನಾವಣೆ ಮುಗಿಯುವವರೆಗೆ ವಾಟ್ಸಪ್‌ನಲ್ಲಿ ಮಾಹಿತಿ ಕಳುಹಿಸುವ ಆಯ್ಕೆಯನ್ನು ಬದಲಾಯಿಸಿ “ಅಡ್ಮಿನ್‌ಗೆ ಮಾತ್ರ” ಆಯ್ಕೆಯನ್ನು ಸೆಟ್ ಮಾಡುವ ಮೂಲಕ ಯಾರೇ ಸಂದೇಶ, ವಿಡಿಯೋ, ಫೋಟೊ ಕಳುಹಿಸದಂತೆ ಎಚ್ಚರವಹಿಸಿ.
*ಚುನಾವಣಾ ಪ್ರಚಾರಕ್ಕೆ ಸಂಬಂಧಪಟ್ಟ ವಾಟ್ಸಪ್ ಗ್ರೂಪ್‌ಗಳು, ರಾಜಕೀಯ ವಾಟ್ಸಪ್ ಗ್ರೂಪ್‌ಗಳಿಗೆ ನಿಮ್ಮನ್ನು ಅಡ್ಮಿನ್ ಮಾಡಿದ್ದರೆ ಅಲ್ಲಿನ ಚಟುವಟಿಕೆಯ ಕುರಿತು ಎಚ್ಚರಿಕೆ ವಹಿಸಿ, ಗ್ರೂಪ್‌ನಿಂದ ಹೊರಬರುವ ಆಯ್ಕೆ ನಿಮಗಿದೆ.
- ಅಡ್ಮಿನ್‌ಗೆ ಅಧಿಕಾರಿಗಳಿಂದ ನಿಯಮ ಉಲ್ಲಂಘನೆಯ ನೋಟಿಸ್ ಬಂದರೆ ಸೂಚಿಸಿದ ಸಮಯದೊಳಗೆ ಹೋಗಿ ಸ್ಪಷ್ಟೀಕರಣ ನೀಡಿ. ನಿರ್ಲಕ್ಷಿಸಿದರೆ ಮುಂದೆ ಅದೇ ದೊಡ್ಡ ಕೇಸು ಆಗಬಹುದು.