ಪುತ್ತೂರು : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವವೇ ಹೀಗೆ. ಸಡಗರ, ಸಂಭ್ರಮದೊಂದಿಗೆ ಸ್ವಚ್ಛತೆ, ಶೃಂಗಾರಕ್ಕೂ ಇಲ್ಲಿದೆ ಆದ್ಯತೆ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರು ವರ್ಷಾವಧಿ ಜಾತ್ರೆಗೆ ಅಣಿಯಾಗುತ್ತಿದ್ದಂತೆ ಇಡೀ ಆಲಯ ಶೃಂಗಾರ ವರ್ಣ ಬಣ್ಣಗಳಿಂದ ಭಕ್ತರ ಕಣ್ಮನ ಸೆಳೆಯುತ್ತಿರುವುದು ನಿಜ.
ಪ್ರತೀ ವರ್ಷ ಜಾತ್ರೆ ಸಂದರ್ಭದಲ್ಲಿ ದೇವಸ್ಥಾನದ ವಠಾರ ಸಹಿತ ಒಳಾಂಗಣ, ಹೊರಾಂಗಣ, ರಥಬೀದಿ ಹೀಗೆ ಇಂಚಿಂಚು ಬಿಡದೆ ಸ್ವಚ್ಛಗೊಳಿಸುವುದರ ಜತೆಗೆ ಸುತ್ತುಪೌಳಿಯ ಒಳಾಂಗಣ, ಹೊರಾಂಗಣದ ಗೋಡೆ, ಉಪ ದೇವರ ಗುಡಿಗಳು ಸಹಿತ ದೇವಸ್ಥಾನದ ಎದುರಗಡೆ ಬಾನೆತ್ತರಕ್ಕೆ ನಿರ್ಮಿಸಿದ ಗೋಪುರಗಳನ್ನು ಶ್ವೇತ ವರ್ಣದಿಂದ ಕಂಗೊಳಿಸುವಂತೆ ಮಾಡಲಾಗುತ್ತದೆ. ದೇವಸ್ಥಾನದ ಒಳಾಂಗಣದಲ್ಲಿ ಗರ್ಭಗುಡಿಯ ಸುತ್ತಲೂ ನಿರ್ಮಿಸಲಾದ ಮರದ ಕೆತ್ತನೆಗಳು, ದೇವಸ್ಥಾನದ ದ್ವಾರ ಸಹಿತ ಕೆತ್ತನೆಗಳಿಗೆ ಅದರದ್ದೇ ಆದ ಬಣ್ಣಗಳನ್ನು ಬಳಿಯುವ ಮೂಲಕ ಸುಣ್ಣ-ಬಣ್ಣದ ಶೃಂಗಾರದಿಂದ ಕಂಗೊಳಿಸುವಂತೆ ಮಾಡಲಾಗುತ್ತದೆ.
ಇನ್ನೇನು ಜಾತ್ರೆ ಆರಂಭವಾಗಲು ಒಂದು ತಿಂಗಳ ಮುಂಚೆಯೇ ಸ್ವಚ್ಛತೆ ಹಾಗೂ ಶೃಂಗಾರಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ಇನ್ನೇನು ಜಾತ್ರೋತ್ಸವಕ್ಕೆ 8-10 ದಿನಗಳಿರುವಂತೆ ಶೃಂಗಾರದ ಕಾಯಕ ಭರದಿಂದ ಸಾಗುತ್ತಿದೆ.
ಅಂತೂ ಏ.10 ರಂದು ಧ್ವಜಾರೋಹಣಗೊಳ್ಳುವ ಮೊದಲು ಇಡೀ ದೇವಾಲಯ ಶ್ವೇತ ವರ್ಣದ ಜತೆ ಆಕರ್ಷಕ ಮಿನಿಚರ್ ಬಲ್ಬ್, ಲೈಟಿಂಗ್ಸ್ ಗಳಿಂದ ಕಂಗೊಳಿಸಲಿದೆ.