ಎಂಥಾ ಸೆಕೆ, ಬೆವರು, ದುರ್ಬಲವೆನಿಸುತ್ತಿರುವ ದೇಹ, ಕೆಲಸ ಮಾಡಲು ನಿರುತ್ಸಾಹ. ಈ ಸುಡು ಬಿಸಿಲಿಗೆ ಇಡೀ ದಿನ ಐಸ್ ಕ್ರೀಮ್ ಕೂಲ್ ಡ್ರಿಂಕ್ಸ್ ಕುಡಿಯುವ ಬಯಕೆ. ಆದರೆ ಇದೆಲ್ಲ ನಮ್ಮ ದೇಹಕ್ಕೆ ಹಿತವಲ್ಲ. ಅಪರುಪಕ್ಕೊಮ್ಮೆ ಕುಡಿದರೆ ತೊಂದರೆ ಆಗದು. ಆದರೆ ದಿನನಿತ್ಯ ಕುಡಿದರೆ ಆರೋಗ್ಯ ಹದಗೆಡುವುದು ಖಂಡಿತ. ಹಾಗಾದರೆ ಬೇರೆ ಉಪಾಯವೇನು. ಬೇಸಿಗೆಯಲ್ಲಿ ದೇಹವನ್ನು ತಂಪು ಮಾಡುವ ಪಾನೀಯ ಮನೆಯಲ್ಲಿ ಮಾಡುವುದು ಹಿತಕರ. ಇದನ್ನು ಕುಡಿದರೆ ದೇಹವನ್ನು ತಂಪು ಮಾಡುವ ಜೊತೆಗೆ ಆರೋಗ್ಯವನ್ನು ಕೂಡ ಸುಧಾರಿಸುತ್ತದೆ. ಇಂತಹ ಮನೆಯಲ್ಲಿ ಸುಲಭವಾಗಿ ತಯಾರಿಸುವಂತಹ ಕೆಲವು ಪಾನೀಯ ಹೇಗೆ ಮಾಡುವುದೆಂದು ತಿಳಿದುಕೊಳ್ಳೋಣ.
ಬೇಸಿಗೆಗೆ ಆರೋಗ್ಯಕರ ಪಾನಿಯಗಳು–
- ರಾಗಿ ಹಾಲು
ಮಾಡುವ ವಿಧಾನ- ಅರ್ಧ ಕಪ್ ರಾಗಿಯನ್ನು ಒಂದು ಗಂಟೆ ನೀರಿನಲ್ಲಿ ನೆನೆಸಿ ನಂತರ ಅದಕ್ಕೆ ಅರ್ಧ ಕಪ್ ತುರಿದ ತೆಂಗಿನಕಾಯಿಯನ್ನು ಹಾಕಿ ರುಬ್ಬಿರಿ. ರುಬ್ಬುವಾಗ ಮೂರು ಬಾದಾಮಿ ಬೀಜವನ್ನು ಕೂಡ ಹಾಕಬಹುದು. ರುಬ್ಬಿದ ಮಿಶ್ರಣವನ್ನು ಸೋಸಿ ಹಾಲನ್ನು ಬೇರೆ ಮಾಡಿ ಅಗತ್ಯವಿದ್ದಷ್ಟು ನೀರನ್ನು ಬೆರೆಸಿರಿ. ಇದಕ್ಕೆ ಬೆಲ್ಲ ಹಾಗೂ ಏಲಕ್ಕಿ ಪುಡಿಯನ್ನು ಹಾಕಿ ಸೇವಿಸಿರಿ. - ಹೆಸರು ಜ್ಯೂಸ್-
ಮಾಡುವ ವಿಧಾನ- ಒಂದು ಲೋಟ ಹೆಸರುಕಾಳನ್ನು ಪರಿಮಳ ಬರುವವರೆಗೆ ಹುರಿಯಿರಿ. ತದನಂತರ ಹುರಿದದ್ದನ್ನು ಪುಡಿ ಮಾಡಿ. ಅಗತ್ಯವಿದ್ದಷ್ಟು ನೀರು ಸೇರಿಸಿ ಬೆಲ್ಲ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ ಕುಡಿಯಿರಿ. - ನಿಂಬೆ ಹಣ್ಣಿನ ಪಾನಕ-
ಮಾಡುವ ವಿಧಾನ- ಒಂದು ಲಿಂಬೆ ಹಣ್ಣಿನ ರಸ ಅದಕ್ಕೆ ಜಜ್ಜಿದ ಎರಡು ಪುದಿನ ಎಲೆ, ಸ್ವಲ್ಪ ಶುಂಠಿ ರಸ ರುಚಿಗೆ ತಕ್ಕಷ್ಟು ಸಕ್ಕರೆ ಹಾಕಿ ಕುಡಿಯಿರಿ. - ಬೆಲ್ಲದ ಪಾನಕ-
ಮಾಡುವ ವಿಧಾನ -ಎರಡು ಲೋಟ ನೀರಿಗೆ ಅರ್ಧ ಲೋಟ ಬೆಲ್ಲದ ಪುಡಿ, ಏಲಕ್ಕಿ ಪುಡಿ ಹಾಗೂ ಲಿಂಬೆ ಹಣ್ಣಿನ ರಸವನ್ನು ಹಾಕಿ ಕುಡಿಯಿರಿ. - ಮಾವಿನಕಾಯಿಯ ಜ್ಯೂಸ್–
ಮಾಡುವ ವಿಧಾನ- ಮಾವಿನಕಾಯಿಯನ್ನು ನೀರು ಹಾಕಿ ಬೇಯಿಸಿ ತದನಂತರ ಸಿಪ್ಪೆ ಹಾಗೂ ಬೀಜವನ್ನು ತೆಗೆದು ಮಿಕ್ಸಿಯಲ್ಲಿ ಹಾಕಿ ಜ್ಯೂಸ್ ಮಾಡಿ. ಅದಕ್ಕೆ ರುಚಿಗೆ ತಕ್ಕಷ್ಟು ಬೆಲ್ಲ ಹಾಗೂ ಏಲಕ್ಕಿ ಪುಡಿ ಸೇರಿಸಿ ಕುಡಿಯಿರಿ. - ಸೌತೆಕಾಯಿ ಜ್ಯೂಸ್ –
ಮಾಡುವ ವಿಧಾನ – ಎರಡು ಸೌತೆಕಾಯಿ ಸಿಪ್ಪೆ ಹಾಗೂ ಬೀಜ ತೆಗೆದು ಅದನ್ನು ಮಿಕ್ಸಿಯಲ್ಲಿ ಹಾಕಿ ಸ್ವಲ್ಪ ಶುಂಠಿ, ಮೂರು ಪುದಿನ ಎಲೆ, ಎರಡು ಚಮಚ ನಿಂಬೆರಸ ಹಾಕಿ ಜ್ಯೂಸ್ ಮಾಡಿರಿ. ಇದನ್ನು ಸೋಸಿ ರುಚಿಗೆ ತಕ್ಕಷ್ಟು ಸಕ್ಕರೆಯನ್ನು ಬೆರೆಸಿ ಕುಡಿಯಿರಿ.
ದೇಹವನ್ನು ತಂಪಾಗಿಡಲು ಹತ್ತಿಯ ಬಟ್ಟೆ ಧರಿಸಿ. ಬಿಸಿಲಿಗೆ ಆದಷ್ಟು ಅಡ್ಡಾಡುವುದು ಕಮ್ಮಿ ಮಾಡಿ. ಸೆಕೆಗಾಲದಲ್ಲಿ ಜೀರ್ಣ ಶಕ್ತಿ ಕಮ್ಮಿ ಇರುವುದರಿಂದ ಲಘು ಆಹಾರ ಸೇವಿಸಿ. ಅಧಿಕ ವ್ಯಾಯಾಮ ಒಳ್ಳೆಯದಲ್ಲ. ಇದನ್ನೆಲ್ಲಾ ಪಾಲಿಸಿ ಆರೋಗ್ಯದಿಂದಿರಿ. ನೀರನ್ನು ಸರಿಯಾಗಿ ಕುಡಿಯಿರಿ. ಕುಡಿಯುವ ನೀರಿಗೆ ಜೀರಿಗೆ ಅಥವಾ ಕೊತ್ತಂಬರಿ ಬೀಜವನ್ನು ರಾತ್ರಿ ನೆನೆಸಿ ಮರುದಿನ ಆ ನೀರನ್ನು ಕುಡಿಯಿರಿ.
✒️ಡಾ. ಹರ್ಷಾ ಕಾಮತ್