ಪುತ್ತೂರು: ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ಕೊನೆಯ ದಿನವಾದ ಗುರುವಾರದ ಕಾರ್ಯಕ್ರಮ ಈ ಕೆಳಗಿನಂತಿದೆ.
ಮುಂಜಾನೆ 5 ರಿಂದ 108 ಕಾಯಿ ಗಣಪತಿ ಹೋಮ, 6.32 ರಿಂದ 7.10 ರ ವರೆಗೆ ನಡೆಯುವ ಮೀನ ಲಗ್ನದ ಶುಭಮುಹೂರ್ತದಲ್ಲಿ ಶ್ರೀ ಉಮಾಮಹೇಶ್ವರ ದೇವರಿಗೆ ಅಷ್ಟಬಂಧಕ್ರಿಯೆ, ಬ್ರಹ್ಮಕಲಶಾಭಿಷೇಕ, 10.30 ಕ್ಕೆ ಶ್ರೀಗಳಿಂದ ರಥ ಸಮರ್ಪಣೆ, 12 ಕ್ಕೆ ಮಹಾಪೂಜೆ, ವೈದಿಕ ಮಂತ್ರಾಕ್ಷತೆ,ಪ್ರಸಾದ ವಿತರಣೆ, ಅನ್ನಸಂತರ್ಪಣೆ, ನಡೆಯಲಿದೆ. ಸಂಜೆ 6.30 ರಿಂದ ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಶ್ರೀ ಭೂತ ಬಲಿ ಉತ್ಸವ, ಪುಷ್ಪರಥೋತ್ಸವ, ವಸಂತಕಟ್ಟೆ ಪೂಜೆ ಜರಗಲಿದೆ.
ಬೆಳಿಗ್ಗೆ 10 ರಿಂದ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀ ಪಾದಂಗಳವರು ಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಸಂಜೀವ ಮಠಂದೂರು, ಗಿರೀಶ್ ಭಾರದ್ವಾಜ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಪಿ.ಕಾರ್ಯಪ್ಪ, ಮಂಗಳೂರು ಎಂಆರ್ ಪಿಎಲ್ ನ ಸೀತಾರಾಮ ರೈ ಚೆಲ್ಯಡ್ಕ, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ. ಪಾಲ್ಗೊಳ್ಳುವರು. ಮಜಲುಮಾರು ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀಶ ತಂತ್ರಿ, ನರಿಮೊಗರು ಗ್ರಾಪಂ ಉಪಾಧ್ಯಕ್ಷ ಸುಧಾಕರ ಕುಲಾಲ್ ಉಪಸ್ಥಿತರಿರುವರು.