ಪುತ್ತೂರು: ನಗರಸಭಾ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಅನುಕೂಲವಾಗುವ ದೃಷ್ಟಿಯಿಂದ ನಗರಸಭೆ ಇದೀಗ ಹೊಸದೊಂದು ಯೋಜನೆಯನ್ನು ಹಾಕಿಕೊಂಡಿದೆ.
ನಗರಸಭಾ ವ್ಯಾಪ್ತಿಯ ಆಯಕಟ್ಟಿನ ಸುಮಾರು 42 ಪ್ರದೇಶಗಳಲ್ಲಿ ಟ್ವಿನ್ – ಬಿನ್ ಕಸದ ತೊಟ್ಟಿಗಳನ್ನು ಇರಿಸುವ ಮೂಲಕ ಹೊಸ ಯೋಜನೆಯನ್ನು ಸಾಕಾರಗೊಳಿಸಿದೆ. ಇದರ ಉದ್ಘಾಟನೆ ಬುಧವಾರ ನಗರಸಭೆಯಲ್ಲಿ ನಡೆಯಿತು.
ಈಗಾಗಲೇ ಮನೆ – ಅಂಗಡಿಗಳಿಂದ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಅದೂ ಹಸಿ ಹಾಗೂ ಒಣ ಕಸ ಪ್ರತ್ಯೇಕವಾಗಿ ಮಾಡಲಾಗುತ್ತಿದೆ. ಆದರೆ ಪೇಟೆಗೆ ಆಗಮಿಸುವ ಸಾರ್ವಜನಿಕರು ತ್ಯಾಜ್ಯ ಎಸೆಯಲು ಸೂಕ್ತ ಸ್ಥಳವೇ ಇಲ್ಲದಂತಾಗಿದೆ. ಎಲ್ಲೆಂದರಲ್ಲಿ ಬಿಸಾಡುವ ತ್ಯಾಜ್ಯಕ್ಕೆ ಕಡಿವಾಣ ಹಾಕುವ ದೃಷ್ಟಿಯಲ್ಲಿ ಟ್ವಿನ್ – ಬಿನ್ ಕೆಲಸ ನಿರ್ವಹಿಸಲಿದೆ. ಇದರಲ್ಲಿ ಹಸಿ ಹಾಗೂ ಒಣ ಕಸಕ್ಕೆ ಪ್ರತ್ಯೇಕ ಬಿನ್‍ಗಳಿವೆ.
ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯ, ಸಾರ್ವಜನಿಕರು ತಿಂದು ಉಗುಳುವ ಪಾನ್ ಸ್ಯಾಚೆಟ್, ಸಿಗರೇಟು, ಬಿಸ್ಕತ್ ರ‍್ಯಾಪರ್ ಮುಂತಾದ ತ್ಯಾಜ್ಯಗಳನ್ನು ಇನ್ನು ಮುಂದೆ ಈ ಟ್ವಿನ್‌ಬಿನ್‌ಗಳಲ್ಲಿ ಹಾಕಬೇಕು. ಹೀಗೆ ಮಾಡುವುದರಿಂದ ನಗರ ಸ್ವಚ್ಛತೆ ಜತೆಗೆ ಜನರಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಲು ಈ ಯೋಜನೆ ಸಹಕಾರಿಯಾಗಲಿದೆ.
ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್,, ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್.ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ, ಪೌರಾಯುಕ್ತ ಮಧು ಎಸ್. ಮನೋಹರ್ ಹಾಗೂ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.