ಪುತ್ತೂರು: ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಇದ್ದ ಮೀಸಲಾತಿಯನ್ನು ರದ್ದು ಮಾಡಿದ ನಿರ್ಣಯವನ್ನು ಖಂಡಿಸಿ ಎಸ್ ಡಿ ಪಿ ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯಿಂದ ಮಂಗ:ಳವಾರ ಪುತ್ತೂರು ಕಿಲ್ಲೆ ಮೈದಾನದ ಅಮರ್ ಜವಾನ್ ಸ್ಮಾರಕ ಜ್ಯೋತಿ ಬಳಿ ಪ್ರತಿಭಟನೆ ನಡೆಯಿತು.
ಮುಸ್ಲಿಂಮರಿಗೆ ಪ್ರವರ್ಗ 2ಬಿ ಅಡಿಯಲ್ಲಿದ್ದ ಶೇ 4ರಷ್ಟು ಮೀಸಲಾತಿಯನ್ನು ರದ್ದು ಮಾಡಿರುವುದು ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾಡಿರುವ ಉದ್ದೇಶಿತ ದಾಳಿಯಾಗಿದೆ. ಇದು ಸರ್ಕಾರದ ಅಸಂವಿಧಾನಿಕ ತೀರ್ಮಾನವಾಗಿದೆ. ಮುಸ್ಲಿಮರ ವಿರುದ್ಧ ಸರ್ಕಾರ ನಡೆಸುವ ಷಡ್ಯಂತ್ರ ಇದಾಗಿದೆ ಎಂದರು.
ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಮಜೀದ್ ಖಾನ್ ಮಾತನಾಡಿ, ವಿವಿಧ ಆಯೋಗ ಕೂಡ ಮುಸ್ಲಿಂಮರನ್ನು ಹಿಂದುಳಿದ ವರ್ಗಗಳಿಗೆ ಸೇರಿಸಿರುವುದನ್ನು ನಾವು ಕಾಣಬಹುದು. ವಾಸ್ತವಾಂಶ ಹೀಗಿದ್ದರೂ ಸಹ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ತಡೆಯೊಡ್ಡುವ ಹಾಗೂ ಮುಖ್ಯವಾಹಿನಿಗೆ ಬರದಂತೆ ನೋಡಿಕೊಳ್ಳುವ ಕುತಂತ್ರ ಮುಂದುವರಿದ ಭಾಗವಾಗಿ 2ಬಿ ಮೀಸಲಾತಿ ರದ್ದುಪಡಿಸಿರುವುದು ದೃಢವಾಗಿದೆ. ಧರ್ಮವನ್ನು ಗುರಿ ಮಾಡಿ ರಾಜಕೀಯ ಬೇಳೆ ಬೆಯಿಸಲು ನಾವು ಬಿಡುವುದಿಲ್ಲ. ನಾವು ಹೋರಾಟದ ಮೂಲಕ ನ್ಯಾಯಾಲಯದಲ್ಲಿ, ಹೈಕೋರ್ಟ್, ಸುಪ್ರೀಮ್ ಕೋರ್ಟ್‌ನಲ್ಲಿ ಪ್ರಶ್ನಿಸಲಿದ್ದೇವೆ ಎಂದರು.
ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಇಬ್ರಾಹಿಂ ಸಾಗರ್ ಮಾತನಾಡಿ, ಬಿಜೆಪಿ ಸರಕಾರ ಬಂದ ಬಳಿಕ ಮುಸಲ್ಮಾನರ ಮೇಲೆ ನಿರಂತರ ದಬ್ಬಾಳಿಕೆ ಮಾಡಿಕೊಂಡು ಬಂದಿದೆ. ಮುಸಲ್ಮಾನರಿಗೆ ಶೈಕ್ಷಣಿಕ, ಉದ್ಯೋಗದಲ್ಲಿ ಸೌಲಭ್ಯವನ್ನು ಸರಕಾರ ಕಿತ್ತುಕೊಳ್ಳುವ ಮೂಲಕ ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಮುಸಲ್ಮಾನರನ್ನು ಇಲ್ಲದಂತೆ ಮಾಡುವ ಹುನ್ನಾರವನ್ನು ಕೋಮುವಾದಿ ಸರಕಾರ ಮಾಡುತ್ತಿದೆ. ಮೀಸಲಾತಿ ಪುನಃ ಕೊಡದಿದ್ದರೆ ವಿಧಾನಸಭಾ ಚಲೋ ಚಳುವಳಿ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ,
ಮುಖಂಡರಾದ ಅಶ್ರಫ್ ಬಾವು, ಪ್ರಧಾನ ಕಾರ್ಯದರ್ಶಿ ರಹೀಮ್, ಕಬಕ ಗ್ರಾ.ಪಂ ಸದಸ್ಯ ಪಾರೂಕ್ ಕಬಕ, ಉಪ್ಪಿನಂಗಡಿ ಗ್ರಾ.ಪಂ ಸದಸ್ಯ ರಶೀದ್ ಪುಣ್ಚಪ್ಪಾಡಿ, ವಿಶ್ವನಾಥ್ ಪುಣ್ಚತ್ತಾರ್, ಪಿಬಿಕೆ ಮಹಮ್ಮದ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.