ಪುತ್ತೂರು: ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ವತಿಯಿಂದ ಜನಾರೋಗ್ಯ ಆಂದೋಲನದ ಭಾಗವಾಗಿ ಬೃಹತ್ ಕಾಲ್ನಡಿ ಜಾಥಾ ಹಾಗೂ “ಆರೋಗ್ಯಕ್ಕಾಗಿ ನಾವು” ಎಂಬ ಶೀರ್ಷಿಕೆಯಡಿ ಐತಿಹಾಸಿಕ ಸಮಾವೇಶ ಮಾ.30 ರಂದು ಜೈನಭವನದಲ್ಲಿ ನಡೆಯಲಿದೆ ಎಂದು ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಝೇವಿಯರ್ ಡಿ”ಸೋಜಾ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಮಿತಿ ಈಗಾಗಲೇ ದ.ಕ.ಜಿಲ್ಲೆಯ ಸುಮಾರು 30 ಸಾವಿರ ಮಂದಿಯನ್ನು ನೇರವಾಗಿ ಸಂಪರ್ಕಿಸಿ ಆಂದೋಲನದ ಕುರಿತು ಮನವರಿಕೆ ಮಾಡಿದೆ. ಈ ಮೂಲಕ ಸಹಿ ಅಭಿಯಾನ, ಪರಸ್ಪರ ಚರ್ಚೆಗಳು ನಡೆದಿವೆ. ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲು ಸಮಿತಿ ಶಿಕ್ಷಣ ಸಂಸ್ಥೆ, ಸರಕಾರೇತರ ಸಂಸ್ಥೆಗಳನ್ನು ಸಹ ತೊಡಗಿಸಿಕೊಂಡಿದೆ ಎಂದು ತಿಳಿಸಿದರು.
ದ.ಕ.ದಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳನ್ನು ಭೇಟಿ ಮಾಡಲಾಗಿದ್ದು, ಸಮಾವೇಶಕ್ಕೆ ತಮ್ಮ ಪ್ರತಿನಿಧಿಗಳನ್ನು ಕಳುಹಿಸಿಕೊಡುವ ಭರವಸೆ ನೀಡಿದ್ದಾರೆ. ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಜತೆಗೆ ಸರಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಆಗ್ರಹಿಸುವುದು ನಮ್ಮ ಗುರಿಯಾಗಿದೆ ಎಂದ ಅವರು, ಜಾಥಾ ಬೆಳಿಗ್ಗೆ 10 ಗಂಟೆಗೆ ದರ್ಬೆ ವೃತ್ತದಿಂದ ಆರಂಭಗೊಳ್ಳಲಿದೆ. ಸುಮಾರು ಒಂದೂ ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಉಪಾಧ್ಯಕ್ಷ ವಿಶ್ವಪ್ರಸಾದ್, ಉಪಾಧ್ಯಕ್ಷ ಬಾಲಕೃಷ್ಣ ಬೋರ್ಕರ್, ಸದಸ್ಯ ಲೋಕೇಶ್ ಉಪಸ್ಥಿತರಿದ್ದರು.