ಜಾತಿ ವ್ಯವಸ್ಥೆ ಇರುವವರೆಗೆ ಮೀಸಲಾತಿ ಬೇಕು ಎಂದು ಪ್ರತಿಪಾದನೆ
ಬೆಂಗಳೂರು : ಇತರ ಹಿಂದುಳಿದ ವರ್ಗಗಳ (ಒಬಿಸಿ) ಕೋಟಾದಡಿಯಲ್ಲಿದ್ದ ಮುಸ್ಲಿಮರ ಶೇ.4 ಮೀಸಲಾತಿಯನ್ನು ರದ್ದುಗೊಳಿಸಿರುವ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿ ಮುಸ್ಲಿಂಮರ ಮೀಸಲಾತಿ ರದ್ದುಗೊಳಿಸಿ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಬಲ ಸಮುದಾಯಗಳಾದ ಒಕ್ಕಲಿಗರು ಮತ್ತು ಲಿಂಗಾಯತರನ್ನು ಒಲೈಸಿಕೊಳ್ಳುವ ಪ್ರಯತ್ನದಲ್ಲಿ ಒಬಿಸಿ ಕೋಟಾದಡಿಯಲ್ಲಿ ಶೇಕಡಾ 4 ರಷ್ಟು ಮೀಸಲಾತಿ ಪಡೆಯುತ್ತಿದ್ದ ಮುಸ್ಲಿಮರ ಮೀಸಲಾತಿ ರದ್ದುಗೊಳಿದ್ದಾರೆ. ಅದನ್ನು ಎರಡು ಸಮುದಾಯಗಳಿಗೆ ಸಮಾನವಾಗಿ ಹಂಚಿದೆ. ಮುಸ್ಲಿಮರನ್ನು ಶೇ.10 ರಷ್ಟು ಮೀಸಲಾತಿ ಇರುವ ಆರ್ಥಿಕವಾಗಿ ದುರ್ಬಲ ವಿಭಾಗ (ಇಡಬ್ಲ್ಯೂಎಸ್) ಅಡಿಯಲ್ಲಿ ಸೇರಿಸಿದೆ. ಈ ಬಗ್ಗೆ ಕಿಡಿ ಕಾರಿರುವ ಸಿದ್ದರಾಮಯ್ಯ ಅವರು, ಜಾತಿ-ಧರ್ಮಗಳ ನಡುವೆ ಜಗಳ ಹಚ್ಚಿ ಚುನಾವಣೆಯಲ್ಲಿ ಲಾಭ ಗಳಿಸುವ ದುರುದ್ದೇಶದ, ತಪ್ಪು ಮಾಹಿತಿ ಆಧರಿಸಿದ ಮತ್ತು ಸಂವಿಧಾನ ವಿರೋಧಿಯಾದ ಪರಿಷ್ಕೃತ ಮೀಸಲಾತಿಯನ್ನು ಪ್ರಕಟಿಸಿರುವ ರಾಜ್ಯ ಸರ್ಕಾರವನ್ನು ತಕ್ಷಣ ವಜಾಗೊಳಿಸಬೇಕು. ಚುನಾವಣೆ ಘೋಷಣೆಗೆ ದಿನ ಎಣಿಕೆ ನಡೆಯುತ್ತಿರುವಾಗ ಅವಸರದಲ್ಲಿ ಪ್ರಕಟಿಸಲಾಗಿರುವ ಮೀಸಲಾತಿ ನೀತಿ ದೋಷಪೂರ್ಣವಾಗಿದೆ ಎಂದಿದ್ದಾರೆ.
ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೆ ಅಲ್ಲಿಯವರೆಗೆ ಮೀಸಲಾತಿ ಇರಬೇಕು ಎಂದು ಅಂಬೇಡ್ಕರ್ ಹೇಳಿದ್ದಾರೆ. ಜಾತಿ ವ್ಯವಸ್ಥೆ ಇರುವುದರಿಂದಲೇ ಅಸಮಾನತೆ ನಿರ್ಮಾಣವಾಗಿರುವುದು. ಇನ್ನೂ ಎಷ್ಟು ಕಾಲ ಮೀಸಲಾತಿ ಪದ್ಧತಿ ಇರಬೇಕು ಎಂದು ವ್ಯಂಗ್ಯವಾಡುವವರು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಬಿಜೆಪಿ ಸರ್ಕಾರವನ್ನು ತಿವಿದಿದ್ದಾರೆ.
ಮೇ 1995ರಿಂದ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲಾಗಿದೆ. ಇದನ್ನು ರದ್ದು ಮಾಡಿ ಎಂದು ಈ ವರೆಗೆ ಯಾವುದೇ ನ್ಯಾಯಾಲಯದ ತೀರ್ಪು ಬಂದಿಲ್ಲ, ಯಾವ ಸಮಿತಿಯ ವರದಿ ಬಂದಿಲ್ಲ. ಹೀಗಿರುವಾಗ ರಾಜ್ಯ ಸರ್ಕಾರ ಯಾಕೆ ಮುಸ್ಲಿಮರ ಮೀಸಲಾತಿ ರದ್ದು ಮಾಡುವ ನಿರ್ಧಾರ ಕೈಗೊಂಡಿದೆ. ಮುಸ್ಲಿಮರ ಮೀಸಲಾತಿ ರದ್ದುಗೊಳಿಸಿ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಮುಸ್ಲಿಮರಿಗೆ ಈಗಲೂ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲಾಗಿಲ್ಲ. ಶೇ.13 ಇರುವ ಮುಸ್ಲಿಮರಿಗೆ ಅಲ್ಪಸಂಖ್ಯಾತರೊಟ್ಟಿಗೆ ಶೇ.4 ಮೀಸಲಾತಿ ನೀಡಲಾಗಿತ್ತು. ಈಗ ಅದನ್ನು ಕಿತ್ತುಹಾಕಲಾಗಿದೆ. ತಮ್ಮ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಒಕ್ಕಲಿಗರು ಶೇ.12 ಮೀಸಲಾತಿ ಕೇಳಿದ್ದರು, ವೀರಶೈವ ಲಿಂಗಾಯತರು ಶೇ.15 ಮೀಸಲಾತಿ ಮತ್ತು ತಮ್ಮನ್ನು 2ಎ ಗೆ ಸೇರಿಸುವಂತೆ ಕೇಳಿದ್ದರು. ಒಟ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಈ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿತ್ತು ಎಂದು ಹೇಳಿದ್ದಾರೆ.