ಕಗ್ಗದ ಸಂದೇಶ- ಇಂದಿಗಿಂದಿನ ಬದುಕು ಉಚಿತ…

ಮರಣದಿಂಮುಂದೇನು? ಪ್ರೇತವೋ? ಭೂತವೋ?|
ಪರಲೋಕವೋ? ಪುನರ್ಜನ್ಮವೋ? ಅದೇನೋ?||
ತಿರುಗಿ ಬಂದವರಿಲ್ಲ, ವರದಿ ತಂದವರಿಲ್ಲ|
ಧರೆಯ ಬಾಳ್ಗ್ಗದರಿನೇಂ–ಮಂಕುತಿಮ್ಮ||
ಮರಣದ ನಂತರ ಆತ್ಮ ಈ ದೇಹವನ್ನು ಬಿಟ್ಟು ಎಲ್ಲಿಗೆ ಹೋಗುತ್ತದೆ ಎನ್ನುವುದು ಇದುವರೆಗೆ ಯಾರಿಗೂ ಖಚಿತವಾಗಿ ತಿಳಿದಿಲ್ಲ. ಜಗತ್ತಿನ ವಾಸನೆಗೆ ಅಂಟಿಕೊಂಡು ಭೂತವಾಗುತ್ತದೋ ಅಥವಾ ಪ್ರೇತವಾಗಿ ಇಲ್ಲಿಯೇ ಸುತ್ತುತ್ತಿರುತ್ತದೋ? ಪರಲೋಕವನ್ನು ಸೇರುತ್ತದೋ ಇಲ್ಲಾ ಮತ್ತೆ ಇದೇ ಭೂಮಿಯಲ್ಲಿ ಇನ್ನೊಂದು ಜನ್ಮವನ್ನು ಹೊಂದುತ್ತದೋ ಎನ್ನುವುದು ಯಾರಿಗೂ ಗೊತ್ತಿಲ್ಲ. ಮರಣದ ನಂತರ‌ ಹಿಂತಿರುಗಿ ಬಂದವರು ಇಲ್ಲ. ಬಂದು ಆ ಬಗ್ಗೆ ಮಾಹಿತಿಯ ವರದಿಯನ್ನು ನೀಡಿದವರು ಇಲ್ಲ. ಈ ಎಲ್ಲ ವಿಚಾರಗಳನ್ನು ತಿಳಿಯುವುದರಿಂದ ನಮ್ಮ ಇಂದಿನ ಜೀವನಕ್ಕೆ ಆಗುವ ಪ್ರಯೋಜನ ಏನೂ ಇಲ್ಲ ಎನ್ನುವುದನ್ನು ಮಾನ್ಯ ಡಿವಿಜಿಯವರು ಈ ಕಗ್ಗದಲ್ಲಿ ಹೇಳಿದ್ದಾರೆ.


ಮರಣ ಅಂದರೆ ಸಾವು ಮಾನವನ ದೇಹಕ್ಕೆ ಮಾತ್ರ. ಆತ್ಮ ಅವಿನಾಶಿ. ಮರಣದ ನಂತರ ಮಾನವನ ಶಾಶ್ವತವಾಗಿರುವ ಈ ಆತ್ಮ ಏನಾಗುತ್ತದೆ? ಎಲ್ಲಿಗೆ ಹೋಗುತ್ತದೆ ಎನ್ನುವ ಬಗ್ಗೆ ಬಹಳಷ್ಟು ಅಭಿಪ್ರಾಯಗಳಿವೆ. ಪರಲೋಕಕ್ಕೆ ಹೋಗುತ್ತದೋ ಇಲ್ಲ ಇಹ ಲೋಕದಲ್ಲೇ ಇನ್ನೊಂದು ಜನ್ಮವನ್ನು ತಾಳುತ್ತದೋ? ಭೂತ ಪ್ರೇತವಾಗಿ ನಮ್ಮನ್ನು ಕಾಡುತ್ತದೋ ಎನ್ನುವ ಹಲವಾರು ಪ್ರಶ್ನೆಗಳಿಗೆ ಯಾರಲ್ಲಿಯೂ ಖಚಿತವಾದ ಉತ್ತರವಿಲ್ಲ‌. ಇಹಲೋಕದ ಜನ್ಮವನ್ನು ಮುಗಿಸಿ ಹೋದವರು ತಿರುಗಿ ಬಂದ ಉದಾಹರಣೆಯೂ ಇಲ್ಲ. ಅದ್ದರಿಂದ ಈ ಬಗ್ಗೆ ಅತಿಯಾದ ಯೋಚನೆ ಆಥವಾ ಚಿಂತೆ ಮಾಡುವದನ್ನು ಬಿಟ್ಟು ಈ ಜನ್ಮದ ಬದುಕಿನ ಬಗ್ಗೆ ಚಿಂತಿಸುವುದು ಉತ್ತಮವಲ್ಲವೆ?|
ನೀ ಬಯಸಿದರೆಷ್ಟೋ ಬಯಸದಿದ್ದರು ಅಷ್ಟೆ||
ಸಾವು ಸುಳಿಯುವುದು ತಾನೆ ಅದರಿಚ್ಚೆಯಂತೆ|
ಅದ ನೆನೆದು ಬೇವಸದಿ ಬೆಂದರೇನಿದೆ ಪುಣ್ಯ? ಚಿಂತೆ ಔಷಧವಲ್ಲ- ಮುದ್ದುರಾಮ||
ಎಂಬ ಕವಿ ಕೆ. ಶಿವಪ್ಪನವರ ನುಡಿಯಂತೆ ಸಾವಿನ ಬಗ್ಗೆ‌ ಮತ್ತು ಸಾವಿನಾಚೆಯ ಬದುಕಿನ ಕುರಿತು ಚಿಂತಿಸುವುದನ್ನು ಬಿಟ್ಟು ಇಂದಿನ ಅಥವಾ ಈ ಕ್ಷಣದ ಬದುಕನ್ನು ಸಂತೋಷದಿಂದ ಅನುಭವಿಸಬೇಕು. ಮುಂದೇನು? ಮತ್ತೇನು? ಎನ್ನುವುದನ್ನು ಬಿಟ್ಟು ‘ಇಂದಿಗಿಂದಿನ ಬದುಕು ಉಚಿತ’ಎಂಬ ಡಿವಿಜಿಯವರ ಕಗ್ಗದ ನುಡಿಯರಿತು ಬಾಳಿದಾಗ ಜೀವನ ಸಾರ್ಥಕವಾಗುವುದಲ್ಲವೆ?
✒️ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು ಕಸಾಪ ಕಾರ್ಕಳ ತಾಲೂಕು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top