ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಕಣಕ್ಕಿಳಿಯುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಪಕ್ಷ ಈಗಾಗಲೇ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಟಿಕೆಟ್ ಘೋಷಣೆಯಾದ 124 ಕೈ ಅಭ್ಯರ್ಥಿಗಳಿಗೆ ಬುಲಾವ್ ನೀಡಿದ ಸ್ಕ್ರೀನಿಂಗ್ ಕಮಿಟಿ ನಾಳೆ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಲಿದೆ. ಬೆಂಗಳೂರು ಅಥವಾ ಹೊರವಲಯದಲ್ಲಿ ನಡೆಯುವ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ.
ಕರ್ನಾಟಕ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಈಗಾಗಲೇ ಬಸ್ ಯಾತ್ರೆ, ಪ್ರಜಾಧ್ವನಿ ಯಾತ್ರೆ ಮೂಲಕ ಅಬ್ಬರದ ಪ್ರಚಾರ ನಡೆಸಿರುವ ಕಾಂಗ್ರೆಸ್, ಚುನಾವಣೆಗೆ ಕಣಕ್ಕಿಳಿಯುವ 224 ಕ್ಷೇತ್ರಗಳ ಪೈಕಿ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಧಿಕೃತವಾಗಿ ಅಂತಿಮಗೊಳಿಸಿದೆ. ಅದರಂತೆ ಚುನಾವಣೆ ಸಮೀಪದಲ್ಲಿ ಪ್ರಚಾರಕ್ಕೆ ಇನ್ನಷ್ಟು ವೇಗ ನೀಡಲು ನಾಳೆ ಕರೆದಿರುವ ಅಭ್ಯರ್ಥಿಗಳೊಂದಿಗಿನ ಸಭೆಯಲ್ಲಿ ಚುನಾವಣಾ ಪ್ರಚಾರ ಹಾಗೂ ರಣತಂತ್ರಗಳ ಬಗ್ಗೆ ಸ್ಕ್ರೀನಿಂಗ್ ಕಮಿಟಿ ಚರ್ಚಿಸಲಿದೆ.