ಪುತ್ತೂರು: ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ, ಪುಷ್ಪರಥ ಸಮರ್ಪಣೆ ಹಾಗೂ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಶನಿವಾರ ಹಸಿರು ಹೊರೆಕಾಣಿಕೆ ಮೆರವಣಿಗೆಗೆ ಸಮರ್ಪಣೆಯಾಯಿತು.
ಬೆಳಗ್ಗೆ ಶ್ರೀ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ ನಡೆದ ಬಳಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಹೊರೆಕಾಣಿಕೆಗೆ ಚಾಲನೆ ನೀಡಲಾಯಿತು. ಬಳಿಕ ಮೆರವಣಿಗೆ ಮುಖ್ಯರಸ್ತೆಯಿಂದ ಹೊರಟು ದರ್ಬೆ, ಬೆದ್ರಾಳ ಮೂಲಕ ದೇವಸ್ಥಾನವನ್ನು ತಲುಪಿತು.
ಮಧ್ಯಾಹ್ನ 12 ಕ್ಕೆ ಮಹಾಪೂಜೆ ನಡೆದು ಪ್ರಸಾದ ವಿತರಣೆಯಾಯಿತು. ಸಂಜೆ 5.30 ಕ್ಕೆ ಕ್ಷೇತ್ರದ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ, 7 ಕ್ಕೆ ವಿವಿಧ ವೈದಿಕ ಕಾರ್ಯಕ್ರಮಗಳಾದ ಸ್ವಸ್ಥಿ ಪುಣ್ಯಾಹವಾಚನ, ಆಚಾರ್ಯದಿ ಋತ್ವಿಗ್ವರಣ, ಪ್ರಾಸಾದಶುದ್ಧಿ, ಅಂಕುರಾರೋಪಣ, ರಕ್ಷೆಘ್ನ ಹೋಮ, ವಾಸ್ತುಹೋಮ, ವಾಸ್ತುಪೂಜಾ ಬಲಿ, ಮಹಾಪೂಜೆ, ಪ್ರಸಾದದ ವಿತರಣೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಪಾರ್ವತಿ ಗಣೇಶ್ ಭಟ್ ಹೊಸಮೂಲೆ ಶಿಷ್ಯೆಯರಿಂದ ಕರ್ನಾಟಕ ಸಾಶ್ತ್ರೀಯ ಸಂಗೀತ, ಪುರುಷರಕಟ್ಟೆ ಬಂಗಾರ್ ಕಲಾವಿದೆರ್ ಅವರಿಂದ ನಾಡ್ಂಡಲ ತಿಕ್ಕಂದ್ ತುಳು ಹಾಸ್ಯಮಯ ನಾಟಕ ಜರಗಿತು.
ಇಂದು ದೇವಸ್ಥಾನದಲ್ಲಿ : ಪ್ರಾತಃಕಾಲ 5 ರಿಂದ ವಿವಿಧ ವೈದಿಕ ಕಾರ್ಯಕ್ರಮಗಳು, ಸಂಜೆ 5.30 ರಿಂದ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡುವರು. ಅವಿನಾಶ್ ಕೊಡೆಂಕಿರಿ ಧಾರ್ಮಿಕ ಉಪನ್ಯಾಸ ನೀಡುವರು. ಶ್ರೀ ಉಮಾಮಹೇಶ್ವರ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀಶ ತಂತ್ರಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಾಯಿಲಕ್ಷ್ಮೀ ಬಳಗದವರಿಂದ ಶಾಸ್ತ್ರೀಯ ಸಂಗೀತ, ವಿದ್ವಾನ್ ಸುದರ್ಶನ್ ಎಂ.ಎಲ್. ಭಟ್ ಬಳಗದವರಿಂದ ಭರತನಾಟ್ಯ ಮತ್ತು ಶ್ರೀನಿವಾಸ ಕಲ್ಯಾಣ ನೃತ್ಯರೂಪದ ಪ್ರದರ್ಶನಗೊಳ್ಳಲಿದೆ