ಒಪ್ಪದ ವಿಜಯಾನಂದ ಕಾಶಪ್ಪನವರ್’ನಿಂದ ರಾಜೀನಾಮೆ ಸಲ್ಲಿಕೆ
ಬೆಂಗಳೂರು: ರಾಜ್ಯ ಸರ್ಕಾರ ಪರಿಷ್ಕೃತ ಮೀಸಲಾತಿ ನೀತಿ ಮೂಲಕ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಡಿ ಪ್ರವರ್ಗದಡಿ ಶೇ. 7ರಷ್ಟು ಮೀಸಲಾತಿ ನೀಡಿದ್ದನ್ನು ಹೋರಾಟ ಸಮಿತಿ ಒಪ್ಪಿಕೊಂಡು ಎರಡು ವರ್ಷಗಳ ಹೋರಾಟವನ್ನು ಹಿಂದೆ ಪಡೆದಿದೆ. ಆದರೆ, ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ವಿಜಯಾನಂದ ಕಾಶಪ್ಪನವರ್ ಪಂಚಮಸಾಲಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸರ್ಕಾರ ನಿನ್ನೆ ಮೀಸಲಾತಿ ಪ್ರಕಟಿಸಿದ ಹಿನ್ನಲೆಯಲ್ಲಿ ಇಂದು ಫ್ರೀಡಂ ಪಾರ್ಕ್‍ನಲ್ಲಿ ಪಂಚಮಸಾಲಿ ಮುಖಂಡರು ಹಾಗೂ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಕುರಿತಾಗಿ ಸ್ವಾಮೀಜಿ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಪ್ರತಿಭಟನೆ ಕೈಬಿಡಲು ನಿರ್ಧರಿಸಲಾಯಿತು
ಹೋರಾಟ ಸ್ಥಗಿತಗೊಳ್ಳುತ್ತಿದ್ದಂತೆ ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಪರ-ವಿರೋಧ ಚರ್ಚೆ ನಡೆದಿದ್ದು, ಸ್ಥಳದಲ್ಲಿ ಗದ್ದಲದ ವಾತಾವರಣ ನಿರ್ಮಾಣಗೊಂಡಿತ್ತು. ಈ ಮಾತಿನ ಚಕಮಕಿ ಕೈ-ಕೈ ಮೀಲಾಯಿಸುವ ಹಂತಕ್ಕೂ ತಲುಪಿತ್ತು.
ನಿರ್ಧಾರಕ್ಕೆ ವಿಜಯಾನಂದ ಕಾಶಪ್ಪನವರ್ ತೀವ್ರ ವಿರೋಧ ವ್ಯಕ್ತಪಡಿಸಿದರು. ನಾವು ಕೇಳಿರುವುದು ಶೇ.15 ಮೀಸಲಾತಿ. ಆದರೆ, ಸರ್ಕಾರ ಶೇ.7 ನೀಡಿದೆ. ಇದು ಚುನಾವಣಾ ತಂತ್ರ ಆಗಿರಬಹುದು. ನೋಟಿಫಿಕೇಶನ್ ಆಗಲಿ. ಬೇರೆ ಸಮುದಾಯದಿಂದ ಕಿತ್ತುಕೊಂಡು ನಮಗೆ ಮೀಸಲಾತಿ ಕೊಡುವುದು ಬೇಕಾಗಿಲ್ಲ. ನಮಗೆ ಕೇವಲ ಶೇ.2 ಮಾತ್ರ ಮೀಸಲಾತಿ ಸಿಕ್ಕಂತಾಗಿದೆ. ಮುಸ್ಲಿಮರ ಮೀಸಲಾತಿಯನ್ನು ಕಸಿದು ನಮಗೆ ಕೊಟ್ಟಿದ್ದಾರೆ. ಆ ಮೂಲಕ ಮುಸ್ಲಿಮರು ಮತ್ತು ನಮ್ಮ ನಡುವೆ ಜಗಳ ತಂದಿಡುವ ಕೆಲಸವನ್ನು ಬಿಜೆಪಿ ಮಾಡಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆಂದು ಹೇಳಿದರು. ಈ ವೇಳೆ ವಿಜಯಾನಂದ ಹಾಗೂ ಯತ್ನಾಳ್ ನಡುವೆ ವಾಕ್ರಮರ ನಡೆಯಿತು.
ಇದಕ್ಕೂ ಮೊದಲು ಮಾತನಾಡಿದ ಜಯ ಮೃತ್ಯುಂಜಯ ಸ್ವಾಮೀಜಿಗಳು, ದೇವರು ನಮಗೆ ಶೇ.2 ಮೀಸಲಾತಿಯನ್ನು ಕರುಣಿಸಿದ್ದಾರೆ. ಹೊಟ್ಟೆ ತುಂಬಾ ಊಟ ಸಿಕ್ಕಿಲ್ಲ. ಆದರೆ ಹಸಿದ ಹೊಟ್ಟೆಗೆ ಪ್ರಸಾದ ಸಿಕ್ಕಿದಂತೆ ಆಗಿದೆ. ನೀತಿ ಸಂಹಿತೆ ಜಾರಿಯಾಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಮುಂದೆ ಯಾವ ಸರ್ಕಾರ ಆಡಳಿತಕ್ಕೆ ಬರುತ್ತದೆಯೋ ಗೊತ್ತಿಲ್ಲ. ದೊಡ್ಡ ದೊಡ್ಡ ಮಠದವರು ನನಗೆ ಬೆಂಬಲ ಕೊಟ್ಟಿಲ್ಲ. ನಮ್ಮ ಹೋರಾಟದ ಪರಿಣಾಮ ಇಡೀ ಲಿಂಗಾಯಿತ ಸಮುದಾಯಕ್ಕೆ ಅನುಕೂಲವಾಗಿದೆ. ಚುನಾವಣೆ ಮುಗಿದ ನಂತರ ಹೋರಾಟ ಮುಂದುವರೆಸೋಣ ಎಂದು ಹೇಳಿದರು.
ಶ್ರೀಗಳ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ವಿಜಯಾನಂದ ಅವರು, ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು.