ಪುತ್ತೂರು: ಸ್ವಾತಂತ್ರ್ಯ ಸೇನಾನಿ, ಶಿಕ್ಷಕ ಶೀಂಟೂರು ದಿ.ನಾರಾಯಣ ರೈ ಸ್ಮರಣಾರ್ಥ ಅವರ ಪುತ್ರ, ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈಯವರು ಸವಣೂರು ಸ.ಪ.ಪೂ. ಕಾಲೇಜಿಗೆ ಕೊಡುಗೆಯಾಗಿ ನೀಡಿದ ನೂತನ ಗೇಟ್ ಇದರ ಉದ್ಘಾಟನೆ ಮಾ. 24ರಂದು ನಡೆಯಿತು.
ಗೇಟ್ ಉದ್ಘಾಟಿಸಿ ಮಾತನಾಡಿದ ಸವಣೂರು ಕೆ. ಸೀತಾರಾಮ ರೈ, ಸುತ್ತಮುತ್ತಲಿನ 8 ಗ್ರಾಮಗಳ ಸರಕಾರಿ ಶಾಲೆಗಳಿಗೆ ಅನೇಕ ಕೊಡುಗೆಗಳನ್ನು ನೀಡುತ್ತಾ ಬಂದಿದ್ದೇನೆ. ಈ ಮೂಲಕ ನನ್ನದೇ ಶಿಕ್ಷಣ ಸಂಸ್ಥೆಯ ಜೊತೆಗೆ ಸರಕಾರಿ ಶಾಲೆಗಳನ್ನು ಪೋಷಣೆ ಮಾಡುವ ಕೆಲಸ ಮಾಡುತ್ತಿದ್ದೇನೆ. ಪ್ರತಿ ವರ್ಷ ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಆದರ್ಶ ವಿವಿಧೋದ್ದೇಶ ಸಹಕಾರ ಸಂಸ್ಥೆಯ ಮೂಲಕ ಕಲಿಕೆಗೆ ಪೂರಕವಾಗುವ ನಿಟ್ಟಿನಲ್ಲಿ ಪ್ರೋತ್ಸಾಹ ಧನವನ್ನು ನೀಡುತ್ತಿದ್ದೇನೆ. ಸವಣೂರು ಸ.ಪ.ಪೂ. ಕಾಲೇಜಿನ ಪ್ರಾಂಶುಪಾಲರ ಕೋರಿಕೆಯ ಮೇರೆಗೆ ಸುಮಾರು 50 ಸಾವಿರ ರೂ. ವೆಚ್ಚದ ಗೇಟನ್ನು ಕೊಡುಗೆಯಾಗಿ ನೀಡಿದ್ದೇನೆ. ಮುಂದೆಯೂ ಸಂಸ್ಥೆಯ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ ಎಂದು ಹೇಳಿ ಶುಭಕೋರಿದರು.
ಅಧ್ಯಕ್ಷತೆ ವಹಿಸಿದ್ದ ಸವಣೂರು ಸ.ಪ.ಪೂ, ಕಾಲೇಜಿನ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಗಿರಿಶಂಕರ್ ಸುಲಾಯ ದೇವಸ್ಯರವರು ಶುಭಹಾರೈಸಿದರು.
ಸವಣೂರು ಸ.ಪ.ಪೂ. ಕಾಲೇಜಿನ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ಪಿ.ಡಿ. ಕೃಷ್ಣಕುಮಾರ್ ರೈ ದೇವಸ್ಯ ಅವರು ಕಾಲೇಜಿಗೆ ಗೇಟ್ ಕೊಡುಗೆ ನೀಡಿದ ಸವಣೂರು ಕೆ.ಸೀತಾರಾಮ ರೈಯವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ, ಗೌರವಿಸಿದರು.
ಕಾಲೇಜಿನ ಪ್ರಾಂಶುಪಾಲೆ ಪದ್ಮಾವತಿ ಎನ್.ಪಿ. ಸ್ವಾಗತಿಸಿ, ಪ್ರೌಢಶಾಲಾ ಮುಖ್ಯಗುರು ರಘು ಬಿ.ಆರ್ ವಂದಿಸಿದರು. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್ ಕಾರ್ಯಕ್ರಮ ನಿರೂಪಿಸಿದರು. ಗುತ್ತಿಗೆದಾರರಾದ ಗಂಗಾಧರ್ ಪೆರಿಯಡ್ಕ, ರಾಜೇಶ್ ಇಡ್ಯಾಡಿ, ಸ.ಪ.ಪೂ. ಕಾಲೇಜ್ ಉಪನ್ಯಾಸಕರು, ಪ್ರೌಢಶಾಲಾ ವಿಭಾಗದ ಶಿಕ್ಷಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.