ಪುತ್ತೂರು: ಪುತ್ತೂರು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ತುಳುನಾಡಿನ ಅವಳಿ ವೀರರಾದ ಕೋಟಿ-ಚೆನ್ನಯ ನಾಮಕರಣ ಸಮಾರಂಭ ಮಾ.26 ಭಾನುವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
ಕರ್ನಾಟಕ ಸರಕಾರದ ಸಾರಿಗೆ ಸಚಿವ ಬಿ.ಶ್ರೀರಾಮುಲು ನಾಮಫಲಕ ಅನಾವರಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ವಹಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್, ಸಚಿವರಾದ ಎಸ್.ಅಂಗಾರ, ಕೋಟಿ ಶ್ರೀನಿವಾಸ ಪೂಜಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಮುಂತಾದವರು ಭಾಗವಹಿಸಲಿದ್ದಾರೆ.
ತಾಲೂಕಿನ ಪಡುಮಲೆ ಕೋಟಿ-ಚೆನ್ನಯರ ಹುಟ್ಟೂರು ಆಗಿದ್ದು, ಈ ನಿಟ್ಟಿನಲ್ಲಿ ಮೂಲಸ್ಥಾನ ಗೆಜ್ಜೆಗಿರಿ ನಂದನ ಬಿತ್ತ್ ಲ್ ಕ್ಷೇತ್ರದ ಪಡುಮಲೆ ಕೋಟಿ-ಚೆನ್ನಯ ಜನ್ಮಸ್ಥಳ ಸಂಚಲನ ಸಮಿತಿ ಕೋಟಿ-ಚೆನ್ನಯರ ಹೆಸರಿಡಬೇಕು ಎಂದು ಶಾಸಕ ಸಂಜೀವ ಮಠಂದೂರು ಹಾಗೂ ನಗರಸಭೆ ಮೂಲಕ ಸರಕಾರವನ್ನು ಒತ್ತಾಯಿಸಿತ್ತು. ಅದರಂತೆ ನಗರಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಸಾರಿಕೆ ಇಲಾಖೆ ಹಾಗೂ ಕೆಎಸ್ ಆರ್ ಟಿಸಿಗೆ ಸಲ್ಲಿಸಲಾಗಿತ್ತು. ಬಳಿಕ ಸರಕಾರದಿಂದ ಮಂಜೂರಾತಿ ಪಡೆಯಲಾಯಿತು.