ಪುತ್ತೂರು: ಸ್ವ ಗ್ರಾಮದ ಶಾಲೆಗಳಲ್ಲಿ ಅದರಲ್ಲೂ ಮಾತೃ ಭಾಷೆಯಲ್ಲಿ ಕಲಿತ ಶಿಕ್ಷಣದಿಂದ ಮಾತ್ರ ಪರಿಪೂರ್ಣತೆ ಪಡೆಯಲು ಸಾಧ್ಯ ಎ೦ದು ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವಿಶ್ವೇಶ್ವರ ವಿ.ಕೆ. ಹೇಳಿದರು.
ಮಾಣಿಲ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಅಮೃತ ಸಿಂಚನ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಶಾಲಾ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ಕೆ ಜಿ ಅವರ ನಿವೃತ್ತಿ ಹಿನ್ನೆಲೆಯಲ್ಲಿ ನಡೆದ ಗುರು ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಅವರು ದೇಶದ ಅಮೃತ ಮಹೋತ್ಸವದ ಸವಿನೆನಪಿಗಾಗಿ ಶಾಲೆಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಹಾಗೂ ಮೌಲ್ಯಯುತ ಲೇಖನಗಳನ್ನು ಒಳಗೊಂಡ ‘ಅಮೃತ ಸಿಂಚನ’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ಮಾರ್ಚ್ 31 ರಂದು ನಿವೃತ್ತರಾಗಲಿರುವ ಶಾಲಾ ಮುಖ್ಯಶಿಕ್ಷಕ ಸುಬ್ರಹ್ಮಣ್ಯ ಭಟ್ ಕೆ.ಜಿ ಅವರಿಗೆ ಗುರು ನಮನದ ಮೂಲಕ ಗೌರವಾರ್ಪಣೆ ಮಾಡಲಾಯಿತು. ಕೇಪು ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಮಾಲತಿ ಅಭಿನಂದನಾ ಮಾತುಗಳನ್ನಾಡಿದರು. ಹಿರಿಯ ವಿದ್ಯಾರ್ಥಿ ರಮೇಶ್ ಎಂ. ಬಾಯಾರು, ಶಿಕ್ಷಕ ಸತೀಶ್ ನಾಯಕ್ ಪಕಳಕುಂಜ, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮುಖ್ಯ ಶಿಕ್ಷಕರನ್ನು ಅಭಿನಂದಿಸಿ ಮಾತನಾಡಿದರು. ಸ್ಮರಣ ಸಂಚಿಕೆ ಪ್ರಧಾನ ಸಂಪಾದಕ ವಿಷ್ಣು ಕನ್ನಡಗುಳಿ ಅವರನ್ನು ಸನ್ಮಾನಿಸಲಾಯಿತು. ಸ್ಮರಣ ಸಂಚಿಕೆಯ ಲೇಖಕರಾದ ರಮೇಶ್ ಎಂ ಬಾಯಾರು, ಪೂವಪ್ಪ ಶೆಟ್ಟಿ, ಅಳಿಕೆ ಅವರನ್ನು ಅಭಿನಂದಿಸಲಾಯಿತು.
ಎಸ್ ಡಿಎಂಸಿ ಅಧ್ಯಕ್ಷ ಶಿವಪ್ರಸಾದ್ ಸೂರಂಪಳ್ಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಿತ, ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ಶಾಲಾ ಸ್ಥಳ ದಾನಿ ಮುರುವ ಮಹಾಬಲ ಭಟ್, ಪೆರುವಾಯಿ ಗ್ರಾಪಂ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ಕೆ ಜಿ ,ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಶಿಕ್ಷಕ ಉಮಾನಾಥ ರೈ ಕಾರ್ಯಕ್ರಮ ನಿರೂಪಿಸಿದರು . ಶಿಕ್ಷಕ ಭುವನೇಶ್ವರ್ ಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾತಿಸಿದರು. ಶಿಕ್ಷಕಿ ಕವಿತಾ ಕೆ ವಂದಿಸಿದರು. ಶಾಲೆಯ ಹಿರಿಯ ವಿದ್ಯಾರ್ಥಿಗಳು ಪೋಷಕರು, ವಿದ್ಯಾಭಿಮಾನಿಗಳು ಶಾಲಾ ಶಿಕ್ಷಕ ವರ್ಗ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.