ವಿನೂತನ ಶೈಲಿಯ ಪ್ರಚಾರಕ್ಕೆ ಮಾದರಿಯಾದ ನಂದಳಿಕೆ ಸಿರಿಜಾತ್ರೆ

ಬಿರು ಬಿಸಿಲಿನಲ್ಲಿ ಬಾಯಾರಿದ ಹಕ್ಕಿಗಳಿಗೆ ಆಸರೆ – ರಸ್ತೆ ಬದಿ ಗಮನಸೆಳೆಯುತ್ತಿರುವ ಆಮಂತ್ರಣ

ಕಾರ್ಕಳ : ತುಳುನಾಡಿನ ಕಾರಣಿಕ ಕ್ಷೇತ್ರ ಐತಿಹಾಸಿಕ ಪ್ರಸಿದ್ಧ ಆದಿ ಆಲಡೆ, ಸಿರಿಕ್ಷೇತ್ರ, ಸಿರಿಗಳ ಮೂಲ ಕ್ಷೇತ್ರ, ನಾಲ್ಕು ಸ್ಥಾನ ನಂದಳಿಕೆ ಹೀಗೆ ನಾನಾ ಹೆಸರುಗಳಿಂದ ಪ್ರಖ್ಯಾತವಾಗಿರುವ ನಂದಳಿಕೆ ಮಹಾಲಿಂಗೇಶ್ವರ ದೇಗುಲದ ಸಿರಿಜಾತ್ರೆಯು ವಿನೂತನ ಶೈಲಿಯ ಪ್ರಚಾರಕ್ಕೆ ಮಾದರಿಯಾಗಿದೆ. ಈ ಬಾರಿ ಎಪ್ರಿಲ್‌ 6ರಂದು ನಂದಳಿಕೆ ಜಾತ್ರೆ ನಡೆಯಲಿದ್ದು, ಬಿರು ಬಿಸಿಲಿನಲ್ಲಿ ಬಾಯಾರಿದ ಹಕ್ಕಿಗಳಿಗೆ ಆಸರೆ ಎಂಬ ಪರಿಸರ ಜಾಗೃತಿಯುಳ್ಳ ಸಂದೇಶದೊಂದಿಗೆ ಜಾತ್ರೆಯ ಆಮಂತ್ರಣದ ಕರೆಯೋಲೆ ಭಕ್ತ ಜನರ ಗಮನ ಸೆಳೆಯುತ್ತಿದೆ.

ಸಿರಿ, ಕುಮಾರ, ಸೊನ್ನೆ- ಗಿಂಡೆ, ಅಬ್ಬಗ- ದಾರಗ ಎಂಬ ಮೂರು ತಲೆಮಾರಿನ ಅದ್ಭುತ ಶಕ್ತಿಗಳ ಈ ಸಾನಿಧ್ಯದಲ್ಲಿ ಈ ಹಿಂದೆ ಅಂಚೆ ಕಾರ್ಡ್‌, ಮಾವಿನ ಎಲೆ, ಗೋಣಿ ಚೀಲ, ಛತ್ರಿ, ಮೈಲುಗಲ್ಲು, ಮಾಸ್ಕ್‌ ಪ್ರಚಾರಕ್ಕೆ ಬಳಕೆಯಾಗಿದ್ದು, ಈ ಮೂಲಕ ಸಾಮಾಜಿಕ ಸಂದೇಶವನ್ನು ನೀಡುವುದರೊಂದಿಗೆ ಜನತೆಯ ಗಮನ ಸೆಳೆದಿದೆ. ಈ ಬಾರಿ ಕಂಬದ ಮಾದರಿಯಲ್ಲಿ ರಟ್ಟಿನ ಬಾಕ್ಸ್‌ ಮಾಡಿ ಅದರ ಮೇಲೆ ಹಕ್ಕಿಗಳಿಗೆ ನೀರುಣಿಸುವ ಮಣ್ಣಿನ ಪಾತ್ರೆ ಇಡಲಾಗಿದ್ದು, ಪ್ರಚಾರ ಕಾರ್ಯದ ಜೊತೆಗೆ ಹಕ್ಕಿಗಳ ಬಾಯಾರಿಕೆಯನ್ನು ತಣಿಸುವ ಕಾಯಕವಾಗುತ್ತಿದೆ. ಈ ಬಾಕ್ಸ್‌ ಸುತ್ತ ನಂದಳಿಕೆಯ ಸಿರಿಜಾತ್ರೆಯ ದಿನಾಂಕವನ್ನು ಮುದ್ರಿಸಲಾಗಿದ್ದು, ವರ್ಣರಂಜಿತವಾಗಿದೆ. ಒಂದು ಪೇಪರ್‌ ಬಾಕ್ಸ್‌ಗೆ ಸುಮಾರು 120ರೂ. ವೆಚ್ಚವಾಗಿದ್ದು, 1500 ರಷ್ಟು ಪ್ರತಿಕೃತಿಗಳನ್ನು ತಯಾರಿಸಲಾಗಿದೆ.



































 
 

ಉಡುಪಿ, ದಕ್ಷಿಣ ಕನ್ನಡ, ಧರ್ಮಸ್ಥಳ, ಚಾರ್ಮಾಡಿ, ಉಜಿರೆ, ಕುಂದಾಪುರ, ತೀರ್ಥಹಳ್ಳಿ, ಶಿವಮೊಗ್ಗ ಹಾಗೂ ಮಲೆನಾಡಿನಲ್ಲಿ ಈ ಪ್ರತಿಕೃತಿಗಳನ್ನು ಅಳವಡಿಸಲಾಗುತ್ತದೆ. ಆದರೆ ಈ ಹಿಂದಿನಂತೆ ರಸ್ತೆಯ ಬದಿಗಳಲ್ಲಿ ಇಟ್ಟು ಬಿಡದೆ ಮನೆಯ ಮುಂಭಾಗದಲ್ಲಿ, ಅಂಗಡಿ ಮುಗ್ಗಟ್ಟುಗಳಲ್ಲಿ ಅಳವಡಿಸಿ ಅವರಿಗೆ ಆ ಮಣ್ಣಿನ ಪಾತ್ರೆಗೆ ನೀರೆರೆಯುವ ಜವಾಬ್ದಾರಿಯನ್ನು ವಹಿಸುವ ಮೂಲಕ ಜನರ ಗಮನ ಸೆಳೆಯುತ್ತಿದೆ.

ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಕೆರೆ-ತೊರೆ, ನದಿಗಳು ಬತ್ತಿ ಹೋಗಿದೆ. ಪಕ್ಷಿಗಳು ನೀರಿಗಾಗಿ ಹಪಾಹಪಿಸುವಂತಾಗಿದೆ. ಈ ನಿಟ್ಟಿನಲ್ಲಿ ಸುಡುಬಿಸಿಲಿನಲ್ಲಿ ಬಾಯಾರಿ ಬರುವ ಪಕ್ಷಿಗಳಿಗೆ ನೀರುಣಿಸಲು ಪ್ರಚಾರ ಫಲಕದಲ್ಲಿ ಮಣ್ಣಿನ ಪಾತ್ರೆಯನ್ನು ಅಳವಡಿಸಲಾಗಿದೆ. ಈ ಮೂಲಕ ನಂದಳಿಕೆ ಜಾತ್ರೆಯ ಧಾರ್ಮಿಕ ನಂಬಿಕೆಯೊಂದಿಗೆ ಪರಿಸರ ಸ್ನೇಹಿ ಜಾತ್ರೆಯಾಗಲಿದೆ ಎಂದು ಈ ಪ್ರಚಾರದ ಪರಿಕಲ್ಪನೆಯ ಹಿಂದಿನ ರೂವಾರಿ ನಂದಳಿಕೆ ಚಾವಡಿ ಅರಮನೆಯ ಸುಹಾಸ್‌ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.

ಪ್ರತಿವರ್ಷವೂ ಹೊಸ ಪರಿಕಲ್ಪನೆಯ ಪ್ರಚಾರ ಶೈಲಿಯೊಂದಿಗೆ ಸಂಭ್ರಮವನ್ನು ನಾಡಿಗೆ ಪಸರಿಸುವಲ್ಲಿ ನಂದಳಿಕೆ ಜಾತ್ರೆಯು ಜನಮೆಚ್ಚುಗೆಗೆ ಪಾತ್ರವಾಗಿದ್ದು, ಈ ಬಾರಿಯ ಪರಿಸರ ಸ್ನೇಹಿ ಪ್ರಚಾರ ಕಾರ್ಯ ಶ್ಲಾಘನೀಯ. ನಂದಳಿಕೆ ಜಾತ್ರೆಯ ಪ್ರಚಾರ ಶೈಲಿ ಇತರೆ ಜಾತ್ರೆ, ಸಭೆ ಸಮಾರಂಭಗಳ ಪ್ರಚಾರ ಕಾರ್ಯಕ್ಕೆ ಮಾದರಿಯಾಗಲಿ ಎಂದು ಜಾಗೃತಿ ಫೌಂಡೇಶನ್‌ನ ಸಂಚಾಲಕ ಸಿಯಾ ಸಂತೋಷ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top