ಪುತ್ತೂರು: ಶಾಸಕ ಸಂಜೀವ ಮಠಂದೂರು ಅವರು 2018ರಿಂದ 2023ರ ಅವಧಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 110247.34 ಕೋಟಿ ರೂ. ಅನುದಾನವನ್ನು ತರಿಸಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ವರ್ಷದ ಕೊರೋನಾ ಕಾಲಘಟ್ಟ ಸಹಿತ ವಿರೋಧ ಪಕ್ಷದವರನ್ನು ಎದುರಿಸಿ ನಿರೀಕ್ಷೆಗೂ ಮೀರಿ ಅನುದಾನವನ್ನು ತರುವಲ್ಲಿ ಯಶಸ್ವಿಯಾಗುವುದರ ಜತೆಗೆ ಅಭೂತಪೂರ್ವ ಅಭಿವೃದ್ಧಿ ಕಾರ್ಯ ಮಾಡಲಾಗಿದೆ ಎಂದು ತಿಳಿಸಿದರು.
2018 ರಿಂದ 2023 ರ ವರೆಗೆ ತಂದಿರುವ ಅನುದಾನದ ವಿವರ ಕೆಳಗಿನಂತಿದೆ.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಿಂದ 9 ಕೋಟಿ ರೂ., ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಿಂದ 1.30 ಕೋಟಿ ರೂ., ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನ 5.54 ಕೋಟಿ ರೂ., ಮಲೆನಾಡು ಅಭಿವೃದ್ಧಿ ಯೋಜನೆಯಿಂದ 2.50 ಕೋಟಿ, ಲೋಕೋಪಯೋಗಿ ಇಲಾಖೆಯ 119.7 ಕೋಟಿ ರೂ., ಗ್ರಾಮೀಣ ರಸ್ತೆಗಳ ಅಭಿವೃದ್ಧಿ 64.59 ಕೋಟಿ ರೂ., ಪಿಎಂಜಿಎಸ್ ವೈ ಯೋಜನೆಯಡಿ ರಸ್ತೆ ಅಭಿವೃದ್ಧಿಗೆ 58 ಕೋಟಿ ರೂ., ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ 51.96 ಕೋಟಿ ರೂ., ರೈಲ್ವೇ ಮೇಲ್ಸೇತುವೆಗಳು, ಸಂಪರ್ಕ ರಸ್ತೆ ಅಭಿವೃದ್ಧಿಗೆ 19.39 ಕೋಟಿ ರೂ., ಪರಿಶಿಷ್ಟ ಜಾತಿ, ಪಂಗಡಗಳ ಕಾಲನಿ ರಸ್ತೆ ಅಭಿವೃದ್ಧಿಗೆ 32.40 ಕೋಟಿ ರೂ., ಸಣ್ಣ ನೀರಾವರಿ ಇಲಾಖೆಯಿಂದ 153.26 ಕೋಟಿ ರೂ., ಜಲಜೀವನ್ ಮಿಷನ್ ಕುಡಿಯುವ ನೀರಿನ ಯೋಜನೆಯಡಿ 60.43 ಕೋಟಿ ರೂ., ಹಿಂದೂ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ, ಇಂಟರ್ ಲಾಕ್, ಸಂಪರ್ಕ ರಸ್ತೆಗಳು ಹಾಗೂ ತಡೆಗೋಡೆ ಸಂರಕ್ಷಣಾ ಕಾರ್ಯಗಳಿಗೆ 18.57 ಕೋಟಿ ರೂ., ಸರಕಾರಿ ವಿವಿಧ ಇಲಾಖಾ ನ್ಯಾಯಾಲಯ ನೂತನ ಕಟ್ಟಡಗಳ ನಿರ್ಮಾಣಕ್ಕೆ 69.46 ಕೋಟಿ ರೂ., ಪುತ್ತೂರು ನಗರಸಭೆ, ವಿಟ್ಲ ಪಟ್ಟಣ ಪಂಚಾಯಿತಿ ವಿವಿಧ ಅನುದಾನ 167.70 ಕೋಟಿ ರೂ., ಶಾಲಾ-ಕಾಲೇಜು, ಅಂಗನವಾಡಿ, ಹಾಸ್ಟೆಲ್ ಗಳಿಗೆ 117.76 ಕೋಟಿ ರೂ., ಸಮುದಾಯ ಭವನ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ 1.30 ಕೋಟಿ ರೂ., ಮೆಸ್ಕಾಂ ಅಭಿವೃದ್ಧಿ ಯೋಜನೆಗಳಿಗೆ 26.26 ಕೋಟಿ ರೂ., ಆರೋಗ್ಯ ಇಲಾಖೆಯ ಅಭಿವೃದ್ಧಿಗೆ 22.97 ಕೋಟಿ ರೂ., ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ವಿವಿಧ ಅನುದಾನ 9 ಕೋಟಿ ರೂ., ಕೇಂದ್ರ, ರಾಜ್ಯ ಸರಕಾರದ ವಿವಿಧ ಯೋಜನೆಗಳಲ್ಲಿ ಫಲಾನುಭವಿಗಳಿಗೆ ವಿತರಣೆಯಾದ ಮೊತ್ತ 66.83 ಕೋಟಿ ರೂ., ಇತರ 24.43 ಕೋಟಿ ಸಹಿತ 110247. 34 ಕೋಟಿ ರೂ. ಅನುದಾನ ಶಾಸಕರ ಮೂಲಕ ತರಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಬಿಜೆಪಿ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಎಸ್.ಅಪ್ಪಯ್ಯ ಮಣಿಯಾಣಿ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಉಪಸ್ಥಿತರಿದ್ದರು.