ದೆಹಲಿ : ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಗೆ ಎರಡು ವರ್ಷ ಜೈಲು ಶಿಕ್ಷೆಯಾದ ಬಳಿಕ ಕುದಿಯುತ್ತಿರುವ ಕಾಂಗ್ರೆಸ್ ನಾಯಕರು ಈಗ ಬಿಜೆಪಿ ನಾಯಕರನ್ನು ನಿರ್ದಿಷ್ಟವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಕಟ್ಟಿಕೊಡಲು ನಾನಾ ದಾರಿಗಳನ್ನು ಹುಡುಕುತ್ತಿದ್ದಾರೆ. ಇದೀಗ ಕಾಂಗ್ರೆಸಿನ ನಾಯಕಿ ಮಾಜಿ ಸಚಿವೆ ರೇಣುಕಾ ಚೌಧರಿ ಮೋದಿ ತನ್ನನ್ನು ಶೂರ್ಪನಖಿ ಎಂದು ಕರೆದಿದ್ದಾರೆ ಎಂದು ಹೇಳಿಕೊಂಡು ಮಾನನಷ್ಟ ಮೊಕದ್ದಮೆ ಹೂಡಲು ತಯಾರಾಗಿದ್ದಾರೆ.
2018ರಲ್ಲಿ ಸದನದಲ್ಲಿ ಭಾಷಣ ಮಾಡುವಾಗ ಪ್ರಧಾನಿ ಮೋದಿ ತನ್ನ ಭಾಷಣಕ್ಕೆ ಗಹಗಹಿಸಿ ನಗುತ್ತಿದ್ದ ರೇಣುಕಾ ಚೌಧರಿಯನ್ನು ಲೇವಡಿ ಮಾಡಿ ರಾಮಾಯಣದ ಬಳಿಕ ಇಂಥ ನಗು ಕಾಣಸಿಗುತ್ತಿದೆ, ನಗಲಿ ಬಿಡಿ ಎಂದು ಹೇಳಿದ್ದರು. ಈದು ರಾಮಾಯಣದ ಶೂರ್ಪನಖಿ ಪಾತ್ರಕ್ಕೆ ಹೋಲಿಕೆ ಮಾಡಿದ ಲೇವಡಿ ಎಂದು ಕಾಂಗ್ರೆಸ್ ಅಂದು ಆರೋಪಿಸಿತ್ತು. ಆದರೆ ಮೋದಿ ಎಲ್ಲೂ ಶೂರ್ಪನಖಿಯ ಹೆಸರು ಉಲ್ಲೇಖಿಸಿರಲಿಲ್ಲ.
ಇದೀಗ ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಗೆ ಸೂರತ್ ಕೋರ್ಟ್ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ರೇಣುಕಾ ಚೌಧರಿ ಕೂಡ ಪ್ರಧಾನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಮಾತನಾಡಿದ್ದಾರೆ. ಸದನದಲ್ಲಿ ನನ್ನನ್ನು ಶೂರ್ಪನಖಿ ಎಂದು ಮೋದಿ ಕರೆದಿದ್ದರು, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ರೇಣುಕಾ ಚೌಧರಿ ಟ್ವಿಟ್ಟರ್‌ನಲ್ಲಿ ಬರೆದುಕೊಂಡು
ಈ ತ್ವರಿತ ನ್ಯಾಯಾಲಯಗಳು ಈಗ ಹೇಗೆ ಕಾರ್ಯನಿರ್ವಹಿಸುತ್ತವೆ ಎಂದು ನೋಡಬೇಕು ಎಂದು ನ್ಯಾಯಾಂಗವನ್ನು ಲೇವಡಿ ಮಾಡಿದ್ದಾರೆ.
ರಾಜ್ಯಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರೇಣುಕಾ ಚೌಧರಿ ಕೆಲವು ಬಾರಿ ಜೋರಾಗಿ ನಕ್ಕಿದ್ದರು. ಈ ಕುರಿತು ಪ್ರಧಾನಿಯವರು ಅಂದಿನ ಸಭಾಪತಿ ವೆಂಕಯ್ಯ ನಾಯ್ಡು ಅವರಿಗೆ, ಸಭಾಪತಿಗಳೇ, ರೇಣುಕಾ ಜೀ ಅವರಿಗೆ ಏನನ್ನೂ ಹೇಳಬೇಡಿ ಎಂದು ನಾನು ವಿನಂತಿಸುತ್ತೇನೆ. ರಾಮಾಯಣ ಧಾರಾವಾಹಿಯ ನಂತರ ಇಂದು ಅಂತಹ ನಗುವನ್ನು ಕೇಳುವ ಭಾಗ್ಯ ಸಿಕ್ಕಿದೆ ಎಂದು ನಗೆ ಚಟಾಕಿ ಹಾರಿಸಿದ್ದರು.ಪ್ರಧಾನಿ ಮೋದಿಯವರ ಈ ಮಾತಿಗೆ ಸದನದಲ್ಲಿ ಆಡಳಿತ ಪಕ್ಷದ ಸಂಸದರ ನಗು ಮೊಳಗಿತ್ತು.