ಪುತ್ತೂರು: ಶ್ರವಣಬೆಳಗೊಳದ ಶ್ರೀ ಜೈನ ಮಠದ ಪೀಠಾಧ್ಯಕರಾದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರ ನಿಧನಕ್ಕೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
ಶ್ರೀ ಜೈನಮಠಕ್ಕೆ ಭೇಟಿ ನೀಡಿದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಅಂತಿಮ ದರ್ಶನ ಪಡೆದರು.
ಸಂತಾಪ ಸಂದೇಶ ನೀಡಿದ ಅವರು, ಶ್ರೀ ಜೈನಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಇನ್ನಿಲ್ಲವಾದುದು ದುಃಖದ ಸಂಗತಿ. ಪೂಜ್ಯರು ಧಾರ್ಮಿಕ ಕ್ಷೇತ್ರದ ಔನ್ನತ್ಯದ ಸ್ಥಾನದಲ್ಲಿದ್ದರೂ ಸರಳತೆಯ ಸಾಕಾರಮೂರ್ತಿಯಾಗಿದ್ದರು. ಇಡೀ ಬದುಕನ್ನು ಸಮಾಜ ಸೇವೆಯಲ್ಲಿ ಮುಡಿಪಾಗಿರಿಸಿ ಜನಸಾಮಾನ್ಯರ ಬದುಕನ್ನು ಧರ್ಮಮಾರ್ಗದಲ್ಲಿ ಸುವ್ಯವಸ್ಥಿತಗೊಳಿಸುವ ಉದಾತ್ತ ಧ್ಯೇಯದಿಂದ ಸತ್ಕಾರ್ಯಗಳ ಅನುಷ್ಠಾನದಲ್ಲಿ ತೊಡಗಿಸಿಕೊಂಡಿದ್ದರು. ಆಧ್ಯಾತ್ಮಿಕ ಮನ್ನಣೆಯ ಜತೆಗೇ ಸಮಕಾಲೀನ ಬದುಕಿಗೆ ಅವಶ್ಯವಾದ ಆಧುನಿಕ ಶಿಕ್ಷಣಕ್ಕೂ ಒತ್ತು ನೀಡಿ ಜನರ ಸಮೃದ್ಧ ಬದುಕಿಗೆ ಶ್ರಮಿಸುತ್ತಿದ್ದರು.
ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೇತೃತ್ವವನ್ನು ವಹಿಸಿ ‘ನ ಭೂತೋ ನ ಭವಿಷ್ಯತಿ ಎಂಬಂತೆ ಅತ್ಯಂತ ಯಶಸ್ವಿಯಗಿ ನಡೆಸಿದ ಕೀರ್ತಿ ಪೂಜ್ಯರದ್ದು. ಅಂತೆಯೇ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಮಹಾ ಮಸ್ತಕಾಭಿಷೇಕ ಮಹೋತ್ಸವವೂ ಅವರ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದುದು ಇಲ್ಲಿ ಸ್ಮರಣೀಯ.
ಜನಮನದಲ್ಲಿ ಭಕ್ತಿಯನ್ನು ನೆಲೆಗೊಳಿಸುವ ಕೈಂಕರ್ಯದಲ್ಲಿ ನಿರತರಾಗಿ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯಾಗಿದ್ದಾರೆ. ನಮ್ಮ ಪರಮಪೂಜ್ಯ ಗುರುಗಳಾದ ಜಗದ್ಗುರು ಶ್ರೀ ಪದ್ಮಭೂಷಣ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳವರು ಹಾಗೂ ಪರಮಪೂಜ್ಯ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಪರಸ್ಪರ ಗೌರವಾದರಣೀಯರಾಗಿದ್ದರು. ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ನಡೆಯುವ ಧರ್ಮಸಭೆಗಳಲ್ಲಿ ಹಾಗೂ ಶ್ರೀಮಠದ ಧಾರ್ಮಿಕ ಸಮಾರಂಭಗಳಲ್ಲಿ ಪೂಜ್ಯರ ದಿವ್ಯ ಉಪಸ್ಥಿತಿಯನ್ನು ನಮ್ಮ ಪೂಜ್ಯ ಗುರೂಜಿರವರು ಸದಾ ಬಯಸುತ್ತಿದ್ದರು. ನಮ್ಮ ಶ್ರೀಮಠದ ಹಲವು ಹತ್ತು ಧಾರ್ಮಿಕ ಸಮಾರಂಭಗಳಲ್ಲಿ ಪಾಲ್ಗೊಂಡು ಪೂಜ್ಯರು ನೀಡಿರುವ ಅನುಗ್ರಹ ಸಂದೇಶಗಳು ಯಾವತ್ತೂ ಸಮಾಜಕ್ಕೆ ದಾರಿದೀಪವಾಗಿದೆ.
ಮಾನವ ಬದುಕಿಗೆ ಪರಪೂರ್ಣತೆಯು ವಿರಕ್ತ ಜೀವನದಿಂದ ಸಾಧ್ಯವೆಂದು ಬೋಧಿಸಿ, ಅವಿಶ್ರಾಂತ ಬದುಕು ನಡೆಸಿದ ಪೂಜ್ಯರು ಭೌತಿಕವಾಗಿ ಇನ್ನಿಲ್ಲವಾದುದರಿಂದ ನಾಡಿಗಷ್ಟೇ ಅಲ್ಲ, ಆಧ್ಯಾತ್ಮಿಕ ಲೋಕಕ್ಕೆ ಭರಿಸಲಾಗದ ನಷ್ಟವುಂಟಾಗಿದೆ. ಭಗವಂತನು ಪೂಜ್ಯರ ನಿಧನದಿಂದ ದುಃಖಿತರಾಗಿರುವ ಭಕ್ತವೃಂದಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನೂ, ಪೂಜ್ಯರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲೆಂದು ಆಶಿಸುತ್ತೇನೆ ಎಂದು ಶ್ರೀ ಆದಿಚುಂಚನಗಿರಿ ಮಠದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದ್ದಾರೆ