ಪುತ್ತೂರು: ಪಾಣಾಜೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಸಾರ್ವಜನಿಕ ಬಳಕೆಗೆ ತೆರೆದುಕೊಂಡಿದ್ದು, ಮುಂದಿನ ದಿನದಲ್ಲಿ ಡಯಾಲಿಸಿಸ್ ಘಟಕ ತೆರೆಯಲು ಪ್ರಯತ್ನಗಳು ನಡೆಯುತ್ತಿವೆ. ಇದರೊಂದಿಗೆ ಪಾಣಾಜೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿದ ಕಬಕ, ಬನ್ನೂರಿನ 3 ಕಡೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಮೇಲ್ದರ್ಜೆಗೇರಿದ ಪಾಣಾಜೆ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ಹಾಗೂ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸಭಾಂಗಣ ಉದ್ಘಾಟಿಸಿ ಅವರು ಮಾತನಾಡಿದರು.
ಪುತ್ತೂರಿನ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ನಿರ್ಮಿಸುವಂತಹ ಯೋಜನೆಯನ್ನು ಮುಂದಿಟ್ಟುಕೊಂಡಿದ್ದೇವೆ. 6 ಎಕರೆ ಜಾಗದಲ್ಲಿ 300 ಬೆಡ್ ಗಳ ಸುಸಜ್ಜಿತ ತಾಲೂಕು ಸರಕಾರಿ ಆಸ್ಪತ್ರೆ ನಿರ್ಮಾಣಕ್ಕೆ 240 ಕೋಟಿ ರೂ. ಯೋಜನೆ ರೂಪಿಸಲಾಗಿದೆ. ವಿನ್ಯಾಸ ನಕ್ಷೆ ತಯಾರಿಸಿ ಆರೋಗ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಅಲ್ಲಲ್ಲಿ ಆರೋಗ್ಯ ಕೇಂದ್ರ ತೆರೆಯುವುದರ ಮೂಲಕ ಶತಮಾನೋತ್ಸವಕ್ಕೆ ಆರೋಗ್ಯ ಕ್ಷೇತ್ರದಲ್ಲಿ ನೂರಕ್ಕೆ-ನೂರು ಯಶಸ್ಸು ಸಾಧಿಸಲು ಪಣತೊಟ್ಟಿದ್ದೇವೆ ಎಂದರು.
ಪ್ರಾಮಾಣಿಕ ಸೇವೆ ನೀಡಿದ ತೃಪ್ತಿಯಿದೆ: ಮಠಂದೂರು
ಕೇಂದ್ರ ಮತ್ತು ರಾಜ್ಯದಲ್ಲಿರುವ ಡಬಲ್ ಇಂಜಿನ್ ಸರಕಾರ ಅನ್ನ, ಅಕ್ಷರ, ಆರೋಗ್ಯ ಕ್ಷೇತ್ರದಲ್ಲಿ ಜನರಿಗೆ ಪ್ರಾಮಾಣಿಕ ಸೇವೆ ನೀಡುತ್ತಿದೆ. ಮಧ್ಯ ವಯಸ್ಸಿನ ನಂತರ ಆರೋಗ್ಯ ಉಳಿಸಿಕೊಳ್ಳುವುದೇ ದೊಡ್ಡ ಯೋಚನೆ. ಇದಕ್ಕಾಗಿ ಪುತ್ತೂರಿನಲ್ಲಿ ಆರೋಗ್ಯ ಕ್ಷೇತ್ರವನ್ನು ಬಲವರ್ಧನೆ ಮಾಡುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ತಾನು ಪ್ರಾಮಾಣಿಕ ಸೇವೆ ನೀಡಿದ ತೃಪ್ತಿ ನನಗಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ದಿನದ 24 ಗಂಟೆಯೂ ಸೇವೆ: ಶಾಸಕರು
ಸಮುದಾಯ ಆರೋಗ್ಯ ಕೇಂದ್ರ ಲೋಕಾರ್ಪಣೆಯಾಗುತ್ತಿದ್ದಂತೆ ದಿನದ 24 ಗಂಟೆಯೂ ಆಸ್ಪತ್ರೆ ಕಾರ್ಯನಿರ್ವಹಿಸಲಿದೆ. ಕನಿಷ್ಠ 3 ಮಂದಿ ವೈದ್ಯರು ಪ್ರತಿದಿನ ಲಭ್ಯರಿರುತ್ತಾರೆ. ಸದ್ಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪೂರ್ಣಕಾಲಿಕ ವೈದ್ಯಾಧಿಕಾರಿಗಳ ನೇಮಕಾತಿ ವಿಳಂಬವಾಗುತ್ತಿದೆ. ಇನ್ನೂ ಕೆಲವೆಡೆ ವೈದ್ಯರ ಕೊರತೆ ಇದೆ ಎಂದು ಶಾಸಕರು ತಿಳಿಸಿದರು.
ಕೋವಿಡ್ ನಿರ್ವಹಣೆ ಅತ್ಯದ್ಭುತ – ಚನಿಲ ತಿಮ್ಮಪ್ಪ ಶೆಟ್ಟಿ
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ತೆಂಗಿನಕಾಯಿ ಒಡೆದು ನೂತನ ಕಟ್ಟಡಕ್ಕೆ ಮುಹೂರ್ತ ಮಾಡಿ ಮಾತನಾಡಿ, ಕೋವಿಡ್ ಸಮಸ್ಯೆಯನ್ನು ಎದುರಿಸುವಲ್ಲಿ ಸರಕಾರ ಯಶಸ್ವಿಯಾಗಿದ್ದು, ವೈದ್ಯರು, ಸಿಬ್ಬಂದಿಗಳ ಸೇವೆಗೆ ಅಭಿನಂದನೆ ಸಲ್ಲಿಸಿದರು. ಈ ಭಾಗದ ಜನರಿಗೆ ಆರೋಗ್ಯ ಸೇವೆ ನೀಡುವಲ್ಲಿ ಯಶಸ್ವಿಯಾದ ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.
ಬೇಡಿಕೆ ಈಡೇರಿಕೆ, ಶಾಸಕರಿಗೆ ಅಭಿನಂದನೆ – ಭಾರತೀ ಭಟ್
ಪಾಣಾಜೆ ಗ್ರಾ.ಪಂ. ಅಧ್ಯಕ್ಷೆ ಭಾರತಿ ಭಟ್ ಮಾತನಾಡಿ, ಗಡಿನಾಡ ಪ್ರದೇಶವಾದ ಪಾಣಾಜೆಯಲ್ಲಿ ಹಲವು ವರ್ಷಗಳ ಬೇಡಿಕೆ ಈಡೇರುತ್ತಿದೆ. ವಿಶೇಷ ಮುತುವರ್ಜಿ ವಹಿಸಿದ ಶಾಸಕರಿಗೆ ಗ್ರಾಮದ ಸಮಸ್ತ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ‘1961 ಆರಂಭವಾದ ಪಾಣಾಜೆ ಆರೋಗ್ಯ ಕೇಂದ್ರ 2014ರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಉದ್ಘಾಟನೆಗೊಂಡಿತ್ತು. 11 ತಿಂಗಳ ಕಾಲಾವಕಾಶದಲ್ಲಿ ಸಮುದಾಯ ಕೇಂದ್ರದ ನೂತನ ಕಟ್ಟಡ ನಿರ್ಮಾಣವಾಗಲಿದೆ. ಕಟ್ಟಡ ಮತ್ತು ಎಲ್ಲಾ ವೈದ್ಯಕೀಯ ಉಪಕರಣಗಳು ರೂ. 12.40 ಕೋಟಿ ಅನುದಾನದಲ್ಲಿ ಒಳಗೊಂಡಿದೆ ಎಂದರು.
ತಾಲೂಕು ನೋಡಲ್ ಅಧಿಕಾರಿ ಡಾ. ಬದ್ರುದ್ದೀನ್, ಪಾಣಾಜೆ ಗ್ರಾ.ಪಂ. ಉಪಾಧ್ಯಕ್ಷ ಅಬೂಬಕ್ಕರ್ ಆರೋಗ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜೇಶ್ ರೈ ಉಪಸ್ಥಿತರಿದ್ದರು. ಅರ್ಚನಾ ಪ್ರಾರ್ಥಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಸ್ವಾಗತಿಸಿ, ಜಯಶ್ರೀ ವಂದಿಸಿದರು. ಪದ್ಮಾವತಿ ಕಾರ್ಯಕ್ರಮ ನಿರೂಪಿಸಿದರು. ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನಿಖಿಲ್, ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಮಿತ್, ಸರೋಜಿನಿ, ನಿತ್ಯಾನಂದ, ಯಶೋಧರ, ಕುಸುಮಾವತಿ, ಪ್ರೇಮ ಅತಿಥಿಗಳನ್ನು ಗೌರವಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ. ಮಾಜಿ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ರಾಧಾಕೃಷ್ಣ ಬೋರ್ಕರ್, ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್ ಸಿ ನಾರಾಯಣ್, ಪಾಣಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪದ್ಮನಾಭ ಬೋರ್ಕರ್, ಉಪಾಧ್ಯಕ್ಷ ಡಾ. ಅಖಿಲೇಶ್ ಪಾಣಾಜೆ, ಪಾಣಾಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ, ಮಾಜಿ ಹಾಗೂ ಹಾಲಿ ಸದಸ್ಯರು, ಪ್ರಮುಖರಾದ ಸದಾಶಿವ ರೈ ಸೂರಂಬೈಲು, ಅಬೂಬಕ್ಕರ್ ಆರ್ಲಪದವು ಸೇರಿದಂತೆ ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರು, ಆರೋಗ್ಯ ಕೇಂದ್ರದ ಸಿಬಂದಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.