ಪುತ್ತೂರು: ದಣಿವರಿಯದ ನಾಯಕಿ ಶಕುಂತಳಾ ಶೆಟ್ಟಿ ಅವರನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯೆಂದು ಘೋಷಿಸುವಂತೆ ಮಹಿಳಾ ಕಾಂಗ್ರೆಸ್ ಆಗ್ರಹಿಸಿದೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ಅರಸ್ ಮಾತನಾಡಿ, ಎರಡು ಬಾರಿ ಶಾಸಕರಾಗಿದ್ದ ಶಕುಂತಳಾ ಶೆಟ್ಟಿ ಅವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದವರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿಯೂ ಗುರುತಿಸಿಕೊಂಡವರು. ಜನರ ಸಮಸ್ಯೆಗಳನ್ನು ಬಹಳ ಹತ್ತಿರದಿಂದ ಕಂಡು, ಅದನ್ನು ಬಗೆಹರಿಸಿದವರು. ಆದ್ದರಿಂದ ಅವರು ಮತ್ತೊಮ್ಮೆ ಶಾಸಕರಾಗಿ ಆಯ್ಕೆ ಆಗಬೇಕು ಎಂದು ಮನವಿ ಮಾಡಿಕೊಂಡರು.
ವೈದ್ಯಕೀಯ ಕಾಲೇಜು ಸೇರಿದಂತೆ ಸಾಕಷ್ಟು ಅನುದಾನವನ್ನು ಪುತ್ತೂರಿಗೆ ತಂದವರು ಶಕುಂತಳಾ ಶೆಟ್ಟಿ. ಮುಂದೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕನಸು ಕಂಡಿದ್ದಾರೆ. ಅವರು ಶಾಸಕ ಅಭ್ಯರ್ಥಿಯಾದರೆ ಖಂಡಿತಾ ಜಯ ದೊರಕುತ್ತದೆ. ಆದ್ದರಿಂದ ಅವರನ್ನು ಅಭ್ಯರ್ಥಿಯಾಗಿ ಘೋಷಿಸುವಂತೆ ಒತ್ತಾಯಿಸಿದವರು.
ಇದು ಕೊನೆ ಚುನಾವಣೆ:
ಶಕುಂತಳಾ ಶೆಟ್ಟಿ ಅವರಿಗೆ ಮುಂದೆ ಅವಕಾಶ ಸಿಗಬಹುದು ಎನ್ನುವ ನಿರೀಕ್ಷೆ ಇಲ್ಲ. ಆದ್ದರಿಂದ ಈ ಬಾರಿ ಟಿಕೇಟ್ ನೀಡುವಂತೆ ಕೇಳಿಕೊಳ್ಳುತ್ತಿದ್ದೇವೆ. ಮಹಿಳಾ ಮತದಾರರ ಒಲವು ಶಕುಂತಳಾ ಶೆಟ್ಟಿ ಅವರ ಪರವಾಗಿ ಇರುವುದರಿಂದ, ಗೆಲುವು ನಿಶ್ಚಿತ ಎಂದು ಶಾರದಾ ಅರಸ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಸಾಹಿರಾ ಬಾನು, ಮಹಿಳಾ ಕಾಂಗ್ರೆಸ್ ಘಟಕದ ಉಪಾಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಖಜಾಂಜಿ ಶುಭ ಮಾಲಿನಿ ಮಲ್ಲಿ, ಸದಸ್ಯೆ ವಿಲ್ಮಾ ಗೋನ್ಸಾಲ್ವಿಸ್ ಉಪಸ್ಥಿತರಿದ್ದರು.