ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಾಂಶುಪಾಲರು ಗ್ರೇಡ್-1 (ಯು. ಜಿ) 310 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಆನ್ಲೈನ್ ಮೂಲಕ ಅರ್ಜಿ ಹಾಕಲು 15-1-2023 ಕೊನೆಯ ದಿನಾಂಕ. ಆಸಕ್ತರು 16-12-2022ರಿಂದ ಅರ್ಜಿ ಸಲ್ಲಿಸಬಹುದು.
ಪ್ರಾಧಿಕಾರದ https://cetonline.karnataka.gov.in/kea/ ಲಿಂಕ್ ಉಪಯೋಗಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಖುದ್ದಾಗಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇರುವುದಿಲ್ಲ. ಅರ್ಜಿ ಸಲ್ಲಿಸುವವರು 55 ವರ್ಷಗಳ ವಯೋಮಿತಿ ಮೀರಿರಬಾರದು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆ) (ಪ್ರಾಂಶುಪಾಲ ಹುದ್ದೆಗಳ ನೇಮಕಾತಿ) (ಸ್ನಾತಕ ಶಿಕ್ಷಣ) (ವಿಶೇಷ) ನಿಯಮಗಳು 2020 ಮತ್ತು ತಿದ್ದುಪಡಿ ಅಧಿಸೂಚನೆ ದಿನಾಂಕ 21/3/2022ರ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆ) (ಪ್ರಾಂಶುಪಾಲರು ಯು. ಜಿ. ಹುದ್ದೆಗಳ ನೇಮಕಾತಿ) (ವಿಶೇಷ) (ತಿದ್ದುಪಡಿ) ನಿಯಮಗಳು 2022ರ ಅನ್ವಯ ಅರ್ಜಿಗಳನ್ನು ಆಹ್ವಾನಿಸಿದೆ.
ಹುದ್ದೆಯ ಪದನಾಮ : ಪ್ರಾಂಶುಪಾಲರು ಗ್ರೇಡ್-1 (ಯು. ಜಿ).
ಆನ್ಲೈನ್ನಲ್ಲಿ ಅರ್ಜಿಗಳನ್ನು ಸಲ್ಲಿಕೆ ಮಾಡಿದ ಮೇಲೆ ಅಭ್ಯರ್ಥಿಗಳು ಇ-ಪೋಸ್ಟ್ ಆಫೀಸ್ನಲ್ಲಿ ಶುಲ್ಕಗಳನ್ನು ಪಾವತಿ ಮಾಡಲು ಕೊನೆಯ ದಿನಾಂಕ 17-1-2023 ಆಗಿದೆ.ಸಾಮಾನ್ಯ ಅರ್ಹತೆ ಮತ್ತು ಪ್ರವರ್ಗ 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳಿಗೆ 5000 ರೂ. ಅರ್ಜಿ ಶುಲ್ಕವಿದೆ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ಇದೆ. ಆದರೆ 2,500 ರೂ. ಪ್ರಕ್ರಿಯೆ ಶುಲ್ಕ ಪಾವತಿ ಮಾಡಬೇಕು.
ಅರ್ಜಿಗಳನ್ನು ಸಲ್ಲಿಸುವವರು 15 ವರ್ಷಗಳ ಕಾರ್ಯಾನುಭವ ಹೊಂದಿರಬೇಕು.
ಸ್ಮರ್ಧಾತ್ಮಕ ಪರೀಕ್ಷೆಗಳ ಸ್ಥಳ ಮತ್ತು ದಿನಾಂಕಗಳ ಅಧಿಸೂಚನೆ ಹೊರಡಿಸಿದಾಗ ಪ್ರವೇಶ ಪತ್ರಗಳನ್ನು ಪ್ರಾಧಿಕಾರದ ಅಂತರ್ಜಾಲದಿಂದ ಅಭ್ಯರ್ಥಿಗಳು ಡೌನ್ಲೋಡ್ ಮಾಡಿಕೊಳ್ಳಬೇಕು. ಅಭ್ಯರ್ಥಿಗಳಿಗೆ ಪ್ರವೇಶ ಪತ್ರಗಳನ್ನು ಪ್ರತ್ಯೇಕವಾಗಿ ರವಾನಿಸಲಾಗುವುದಿಲ್ಲ. ಸ್ಮರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಾಧಿಕಾರದ ವೆಬ್ಸೈಟ್ನಲ್ಲಿ ನಂತರ ಪ್ರಕಟಿಸಲಾಗುತ್ತದೆ.
ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಕನ್ನಡ ಭಾಷಾ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆಯದ ಹೊರತು ಆಯ್ಕೆಗೆ ಅರ್ಹರಲ್ಲ. ಈ ಪರೀಕ್ಷೆಯು ಗರಿಷ್ಠ 150 ಅಂಕಗಳ ಒಂದು ಪ್ರಶ್ನೆ ಪತ್ರಿಕೆಯನ್ನು ಒಳಗೊಂಡಿರುತ್ತದೆ. ಅಭ್ಯರ್ಥಿ ಈ ಪತ್ರಿಕೆಯಲ್ಲಿ ಅರ್ಹತೆ ಹೊಂದಲು ಕನಿಷ್ಠ 50 ಅಂಕಗಳನ್ನುಗಳಿಸಬೇಕು. ಈ ಪ್ರಶ್ನೆ ಪತ್ರಿಕೆಯನ್ನು ಎಸ್ಎಸ್ಎಲ್ಸಿ ಹಂತದ ಮಾನದಂಡವಾಗಿಟ್ಟುಕೊಂಡು ಸಿದ್ಧಪಡಿಸಲಾಗುತ್ತದೆ.
ಹುದ್ದೆಗಳ ವಿವರ, ಶೈಕ್ಷಣಿಕ ಅರ್ಹತೆ, ಸ್ಮರ್ಧಾತ್ಮಕ ಪರೀಕ್ಷೆ, ನೇಮಕಾತಿ ವಿವರಗಳಿಗಾಗಿ ಅಭ್ಯರ್ಥಿಗಳು https://cetonline.karnataka.gov.in/kea/ ವೆಬ್ಸೈಟ್ ನೋಡಬಹುದಾಗಿದೆ.