ಪುತ್ತೂರು : ಬಂಟ್ವಾಳ ತಾಲೂಕಿನ ಇಡ್ಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದದಿಂದ ಪಡೆದುಕೊಂಡ ಕೃಷಿ ಸಾಲ ಮರುಪಾವತಿ ಮಾಡದ ಹಿನ್ನಲೆಯಲ್ಲಿ ಬ್ಯಾಂಕ್‌ನಿಂದ ಕಿರುಕುಳ ಅನುಭವಿಸಿ ಆತ್ಮಹತ್ಯೆ ಮಾಡಿಕೊಂಡ ವೀರಪ್ಪ ಗೌಡ ಅವರ ಕುಟುಂಬಕ್ಕೆ ಅವರ ಸಂಪೂರ್ಣ ಸಾಲಮನ್ನಾದ ಜತೆ ಸರಕಾರ ಕನಿಷ್ಠ 50 ಲಕ್ಷ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ ದ.ಕ.ಜಿಲ್ಲಾ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಸಂಘದ ಜಿಲ್ಲಾ ಸಂಚಾಲಕ, ಒಕ್ಕೂಟದ ಮುಖ್ಯಸ್ಥ ರೂಪೇಶ್ ರೈ ಅಲಿಮಾರ್ ತಿಳಿಸಿದ್ದಾರೆ.
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೃತ ವೀರಪ್ಪ ಗೌಡರಿಗೆ 1.5 ಎಕ್ರೆ ಕೃಷಿ ಜಾಗವಿದ್ದು, ಇಡ್ಕಿದು ಬ್ಯಾಂಕ್‌ನಿಂದ ಸಾಲ ಪಡೆದುಕೊಂಡಿದ್ದರು. ಸಾಲ ಅವಧಿಯೊಳಗೆ ಸಾಲ ಮರುಪಾವತಿ ಮಡದ ಹಿನ್ನಲೆಯಲ್ಲಿ ಸಹಕಾರಿ ಸಂಘದವರು ಸಾಲ ಪಾವತಿ ಮಾಡದಿದ್ದಲ್ಲಿ ಜಮೀನು ಏಲಂ ಮಾಡಲಾಗುವುದು ಎಂದು ಹೆದರಿಸುತ್ತಿದ್ದರು. ಈ ಹಿನ್ನಲೆಯಲ್ಲಿ ಅವರು ಭಯಭೀತರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ನಿಟ್ಟಿನಲ್ಲಿ ಅವರ ಸಂಪೂರ್ಣ ಸಾಲವನ್ನು ಮನ್ನಾ ಮಾಡುವುದರ ಜತೆಗೆ ಅವರಿಗೆ ಇಬ್ಬರು ಮಕ್ಕಳಿದ್ದು, ಅವರ ಭವಿಷ್ಯದ ದೃಷ್ಟಿಯಿಂದ 50 ಲಕ್ಷ ಪರಿಹಾರ ಸರಕಾರ ನೀಡಬೇಕು ಎಂದು ಒತ್ತಾಯಿಸಿದರು.
ಸರಕಾರದ ವತಿಯಿಂದ ಕೃಷಿ ಸಾಲದ ವಸೂಲಾತಿಗಾಗಿ ಯಾವುದೇ ರೀತಿಯ ಕಾನೂನು ಹೋರಾಟವನ್ನು ಮಾಡಬಾರದೆಂದು ನಿರ್ದೇಶನ ಇದ್ದರೂ ಈ ರೀತಿ ಮಾಡುತ್ತಿರುವುದರಿಂದ ರೈತಾಪಿ ವರ್ಗದವರು ಕಂಗಾಲಾಗಿದ್ದಾರೆ. ಮುಂದಿನ ದಿನಗಳಲ್ಲಿ ಯವುದೇ ಸಹಕಾರಿ ಸಂಘದವರು ಸಾಲ ವಸೂಲಾತಿಗಾಗಿ ಬಲಾತ್ಕಾರದ ಯವುದೇ ರೀತಿಯ ಕ್ರಮವನ್ನು ಕೈಗೊಳ್ಳದಂತೆ, ರೈತಾಪಿ ವರ್ಗದವರ ಮನೆಗಳಿಗೆ ತೆರಳಿ ಬೆದರಿಕೆ ಹಾಕದಂತೆ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಮಿಟಿ ಸದಸ್ಯ ಸನ್ನಿ ಡಿ ಸೋಜಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಭಟ್ ಪಾದೆಕಲ್ಲು, ಅಧ್ಯಕ್ಷ ಅಮರನಾಥ ಆಳ್ವ ಈಶ್ವರಮಂಗಲ, ಕಾರ್ಯದರ್ಶಿ ಭರತ್ ರೈ ಸವಣೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕೊಪ್ಪಳ ಉಪಸ್ಥಿತರಿದ್ದರು.