ದೆಹಲಿ : ಲಂಡನ್‌ನ ಭಾರತದ ಹೈಕಮಿಷನರ್ ಕಚೇರಿಯಲ್ಲಿ ಖಲಿಸ್ಥಾನಿ ಬೆಂಬಲಿಗರು ತ್ರಿವರ್ಣ ಧ್ವಜವನ್ನು ಕಿತ್ತೆಸೆದಿರುವ ಕೃತ್ಯಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಖಲಿಸ್ಥಾನಿ ಮುಖಂಡ ಅಮೃತಪಾಲ್ ಸಿಂಗ್ ಬಂಧನಕ್ಕೆ ಭಾರತದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯನ್ನು ವಿರೋಧಿಸಿ ಕೆಲವು ಖಲಿಸ್ಥಾನಿ ಬೆಂಬಲಿಗರು ಲಂಡನ್‌ನಲ್ಲಿರುವ ಭಾರತದ ದೂತವಾಸದ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಓರ್ವ ಯುವಕ ಹೈಕಮಿಷನ್ ಕಚೇರಿ ಇರುವ ಕಟ್ಟಡ ಹತ್ತಿ ಭಾರತದ ಧ್ವಜವನ್ನು ಕಿತ್ತು ಹಾಕಿದ್ದಾನೆ. ಈ ವೀಡಿಯೊ ನಿನ್ನೆಯಿಂದ ವೈರಲ್ ಆಗಿದ್ದು, ಖಲಿಸ್ಥಾನಿ ಬೆಂಬಲಿಗರ ಪುಂಡಾಟಕ್ಕೆ ಭಾರತ ಸರಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭಾನುವಾರ ತಡರಾತ್ರಿ ಭಾರತದ ಯುಕೆ ರಾಜತಾಂತ್ರಿಕರನ್ನು ಕರೆಸಿ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ. ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ ಈ ಕುರಿತು ಟ್ವೀಟ್ ಮಾಡಿದ್ದು, ಭಾರತ ಈ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದ್ದಾರೆ.
ಭದ್ರತಾ ಲೋಪಕ್ಕೆ ವಿವರಣೆ ನೀಡುವಂತೆ ಬ್ರಿಟನ್ ರಾಜತಾಂತ್ರಕ ಕಚೇರಿಯನ್ನು ಭಾರತ ಕೋರಿದೆ.
ಈ ನಡುವೆ ಬ್ರಿಟನ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಟ್ವಿಟರ್‌ನಲ್ಲಿ ಕೃತ್ಯವನ್ನು ಖಂಡಿಸಿದ್ದಾರೆ. ಈ ನಾಚಿಕೆಗೇಡಿನ ಕೃತ್ಯವನ್ನು ನಾನು ಖಂಡಿಸುತ್ತೇನೆ, ಇದು ಖಂಡಿತ ಸಮ್ಮತವಲ್ಲ ಎಂದು ಎಲ್ಲಿಸ್ ಟ್ವೀಟ್ ಮಾಡಿದ್ದಾರೆ.