ನ್ಯಾಯಾಂಗದ ಹೆಮ್ಮೆ ಜಸ್ಟೀಸ್ ಕೌಡೂರು ಸದಾನಂದ ಹೆಗ್ಡೆ

ಲೋಕಸಭೆಯ ಸ್ಪೀಕರ್ ಆಗಿ ಅನನ್ಯ ಮಾದರಿ

1973ರ ಇಸವಿಯ ಹೊತ್ತಿಗೆ ಸುಪ್ರೀಂ ಕೋರ್ಟಿನ ಒಬ್ಬ ನ್ಯಾಯಾಧೀಶರು ತಮ್ಮ ನ್ಯಾಯಾಂಗ ಬದ್ಧತೆಗೆ ಭಾರಿ ಹೆಸರು ಮಾಡಿದ್ದರು. ಯಾವ ಮುಲಾಜು ಇಲ್ಲದೆ ಅವರು ನೇರ ಮತ್ತು ದಿಟ್ಟ ತೀರ್ಪನ್ನು ಕೊಡುತ್ತಿದ್ದರು. ಒಮ್ಮೆ ದೇಶದ ಪವರಫುಲ್ ಪ್ರಧಾನಿ ಆಗಿದ್ದ ಇಂದಿರಾ ಗಾಂಧಿಯವರ ಒಂದು ಕೇಸ್ ವಿಚಾರಣೆಗೆ ಕೋರ್ಟಿಗೆ ಬಂದಾಗಲೂ ಯಾವ ಮುಲಾಜಿಗೆ ಬಗ್ಗದೆ ತೀರ್ಪು ನೀಡಿ ಭಾರಿ ಹೆಸರು ಮಾಡಿದ್ದರು. ಅವರೇ ಜಸ್ಟೀಸ್ ಕೆ. ಎಸ್. ಹೆಗ್ಡೆ.
ಅದೇ ಹೊತ್ತಿಗೆ ಕೇಶವಾನಂದ ಭಾರತಿ ತೀರ್ಥರು ವರ್ಸಸ್ ಕೇರಳ ಸರಕಾರದ ಅತ್ಯಂತ ಸೂಕ್ಷ್ಮ ಕೇಸ್ ವಿಚಾರಣೆಗೆ ಬಂದಾಗಲೂ ಒಂದಿಷ್ಟು ವಿಚಲಿತ ಆಗದೆ ತೀರ್ಪು ಕೊಟ್ಟಿದ್ದರು. ಅಂದು ಅವರು ಕೊಟ್ಟ ತೀರ್ಪಿನ ಮುಖ್ಯಾಂಶ ಎಂದರೆ…
ಒಬ್ಬ ಶಾಸಕನನ್ನು ಕೋರ್ಟಿಗೆ ಕರೆದು ವಿಚಾರಣೆ ಮಾಡಬೇಕು ಅಂತಾದರೂ ಸ್ಪೀಕರ್ ಅನುಮತಿ ಪಡೆಯಬೇಕು. ಅಂತಹ ಸಂದರ್ಭದಲ್ಲಿ ಒಬ್ಬ ಶಂಕರಾಚಾರ್ಯ ಸಮಾನರಾದ ಓರ್ವ ಪೀಠಾಧಿಪತಿಯನ್ನು ವಿಚಾರಣೆ ಮಾಡಲು ಮಧ್ಯರಾತ್ರಿ ಅರೆಸ್ಟ್ ಮಾಡಿದ್ದು ಸಂವಿಧಾನದ ಘೋರ ಅಪಚಾರ. ಕೇರಳ ಸರಕಾರ ಅದರ ಹೊಣೆಯನ್ನು ಹೊರಬೇಕು ಎಂದು ಗುಂಡು ಸಿಡಿದ ಹಾಗೆ ತೀರ್ಪು ನೀಡಿ ಸಂಚಲನ ಉಂಟು ಮಾಡಿದ್ದರು.
ಇಂತಹ ತೀರ್ಪು ನೀಡಲು ತುಂಬ ಎದೆಗಾರಿಕೆ ಮತ್ತು ಸಂವಿಧಾನದ ನಿಷ್ಠೆ ಬೇಕು. ಅವೆರಡೂ ಕೂಡ ಸುಪ್ರೀಂ ಕೋರ್ಟಿನ ಅಂದಿನ ನ್ಯಾಯಮೂರ್ತಿ ಆಗಿದ್ದ ಜಸ್ಟೀಸ್ ಹೆಗ್ಡೆಯವರಿಗೆ ಇತ್ತು ಎನ್ನುವುದು ನಿಜಕ್ಕೂ ಗ್ರೇಟ್. ಅವರು ತಮ್ಮ ಕಠಿಣವಾದ ತೀರ್ಪಿನ ಕಾರಣಕ್ಕಾಗಿ ಯಾರನ್ನೂ ಎದುರು ಹಾಕಿಕೊಳ್ಳಲು ಹಿಂದೆ ಮುಂದೆ ನೋಡಿದವರೇ ಅಲ್ಲ. ಯಾವ ಪ್ರಭಾವ ಮತ್ತು ಮುಲಾಜುಗಳಿಗೂ ತಲೆ ಬಾಗಿದವರಲ್ಲ. ನ್ಯಾಯಾಂಗದ ಘನತೆಯನ್ನು ಎತ್ತರಿಸುವ ಯಾವ ಅವಕಾಶಗಳನ್ನು ಅವರು ಬಿಟ್ಟವರಲ್ಲ.

ಅವರು ನಮ್ಮ ಕಾರ್ಕಳ ತಾಲೂಕಿನ ಕೌಡೂರಿನವರು.





























 
 

ಅವರು ಕಾರ್ಕಳ ತಾಲೂಕಿನ ಕೌಡೂರು ಎಂಬ ಹಳ್ಳಿಯಲ್ಲಿ ಹುಟ್ಟಿ, ಹಳ್ಳಿಯ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿ ಮುಂದೆ ತನಗೆ ಇಷ್ಟವಾದ ಕಾನೂನು ಪದವಿಯನ್ನು ಪಡೆದವರು.
ಮುಂದೆ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ 1947-51ರವರೆಗೆ ಕೆಲಸ ಮಾಡಿದರು. ಆಗಲೂ ನೇರಾನೇರ ವಾದ ಮಂಡನೆ ಅವರದ್ದು. ಎಷ್ಟು ದುಡ್ಡು ಕೊಟ್ಟರೂ ಅಪರಾಧಿಗಳ ಪರವಾದ ಒಂದೇ ಒಂದು ಕೇಸ್ ಕೂಡ ಮುಟ್ಟುತ್ತಿರಲಿಲ್ಲ. ಅದೇ ಬಡವರ ನ್ಯಾಯಯುತವಾದ ಕೇಸ್ ಅಂತಾದರೆ ದುಡ್ಡು ಪಡೆಯದೆ ನಿಖರವಾದ ವಾದವನ್ನು ಮಾಡಿ ಕೇಸನ್ನು ಗೆಲ್ಲಿಸಿಕೊಡುತ್ತಿದ್ದರು.

ಸುಪ್ರೀಂ ಕೋರ್ಟಿನ ಜಡ್ಜ್ ಆಗಿ ಕೀರ್ತಿಯ ಶಿಖರ

ಮುಂದೆ ಅವರು ಸುಪ್ರೀಂ ಕೋರ್ಟಿನ ಜಡ್ಜ್ ಆದರು. ಆರು ವರ್ಷಗಳ ಕಾಲ ಅವರು ಅದೇ ಹುದ್ದೆಯಲ್ಲಿ ಮುಂದುವರಿದರು. ನ್ಯಾಯಪರತೆಗೆ ಹೆಸರಾದರು. ಎಷ್ಟೋ ನ್ಯಾಯವಾದಿಗಳು ಅವರ ಮುಂದೆ ಸುಳ್ಳು ಹೇಳಲು ಹೆದರುವ ಪ್ರಸಂಗ ಇತ್ತು.
ʼನೀವು ನ್ಯಾಯವಾದಿಗಳಾಗಿ,ಕಾನೂನುವಾದಿಗಳು ಆಗುವುದು ಬೇಡʼ ಎನ್ನುವುದು ಅವರು ದಿನವೂ ವಕೀಲರಿಗೆ ಹೇಳುತ್ತಿದ್ದ ಮಾತುಗಳು.
ಕಾನೂನಿನ ಮತ್ತು ಸಂವಿಧಾನದ ಬಗ್ಗೆ ಆಳವಾದ ಜ್ಞಾನ ಮತ್ತು ಮಾತುಗಾರಿಕೆ ಹೊಂದಿದ್ದ ಜಸ್ಟೀಸ್ ಹೆಗ್ಡೆಯವರು ತನ್ನ ಜನಪ್ರಿಯತೆಯ ತುದಿಯಲ್ಲಿ ಇರುವಾಗಲೇ ಹುದ್ದೆಗೆ ರಾಜೀನಾಮೆ ಕೊಟ್ಟು ಹೊರಬಂದರು. ಕಾರಣ ಅವರಿಗಿಂತ ಕಡಿಮೆ ವಯಸ್ಸು ಮತ್ತು ನ್ಯಾಯಾಂಗದ ಅನುಭವ ಹೊಂದಿದ್ದ ಜಸ್ಟೀಸ್ ಎ. ಎನ್. ರೇ ಅವರನ್ನು ಭಾರತ ಸರಕಾರ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಆಗಿ ನೇಮಕ ಮಾಡಿತ್ತು. ನ್ಯಾಯಮೂರ್ತಿಗಳ ಬಡ್ತಿಯ ವಿಷಯದಲ್ಲಿಯೂ ರಾಜಕೀಯ ಮಾಡುವ ಸರಕಾರಗಳು ಎಲ್ಲ ಕಾಲದಲ್ಲಿಯೂ ಇದ್ದವು. ಆದರೆ ಸ್ವಾಭಿಮಾನಿ ಹೆಗ್ಡೆಯವರು ಅದನ್ನು ಸಹಿಸುವುದು ಸಾಧ್ಯವೇ ಇರಲಿಲ್ಲ. ಒಂದು ಕ್ಷಣ ಕೂಡ ವಿಚಲಿತ ಆಗದ ಜಸ್ಟೀಸ್ ಹೆಗ್ಡೆಯವರು ತನ್ನ ರಾಜೀನಾಮೆಯನ್ನು ಬಿಸಾಡಿ ನ್ಯಾಯಾಂಗ ಸೇವೆಯಿಂದ ಹೊರಬಂದರು.
ಇದು ಅವರ ಸ್ವಾಭಿಮಾನದ ದಿಟ್ಟ ನಿರ್ಧಾರ ಆಗಿತ್ತು ಎಂದು ಅವರ ಜ್ಯೂನಿಯರ್ ಜಡ್ಜ್ ಆಗಿದ್ದ ಜಸ್ಟೀಸ್ ಎಂ.ಎಂ. ಇಸ್ಮಾಯಿಲ್ ಅವರು ಒಂದು ಕಡೆ ಅಭಿಪ್ರಾಯ ಪಡುತ್ತಾರೆ.

ರಾಜಕೀಯ ಶುದ್ಧೀಕರಣದ ಕೆಲಸ ಆರಂಭ!

ಮುಂದೆ ರಾಜ್ಯಸಭೆಯ ಸದಸ್ಯರಾಗಿ ಅವರು ಆರು ವರ್ಷಗಳ ಒಂದು ಪೂರ್ಣ ಅವಧಿಗೆ ಸೇವೆ ಸಲ್ಲಿಸಿದರು. ಆಗ ಜಯಪ್ರಕಾಶ್ ನಾರಾಯಣ್ ಅವರು ರಚನೆ ಮಾಡಿದ ಜನತಾ ಪಕ್ಷದ ಮೂಲಕ ರಾಜಕೀಯಕ್ಕೆ ಧುಮುಕಿದರು. ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟದಲ್ಲಿ ಆಡ್ವಾಣಿ ಅವರ ಜೊತೆಗೆ ಹೋರಾಟಕ್ಕೆ ಇಳಿದರು. ಸೆರೆಮನೆ ವಾಸ ಅನುಭವಿಸಿದರು. 1977ರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಗೆದ್ದು ಲೋಕಸಭೆಯನ್ನು ಪ್ರವೇಶ ಮಾಡಿದರು. ಆಗ ಅವರ ನಿಜವಾದ ಸಾಮರ್ಥ್ಯವನ್ನು ದೇಶ ಕಂಡಿತು.

ಸ್ಪೀಕರ್ ಆಗಿ ಜಸ್ಟೀಸ್ ಹೆಗ್ಡೆಯವರು ತುಂಬಾ ಪವರಫುಲ್

ಅದು ಮೊದಲ ಕಾಂಗ್ರೆಸ್ಸೇತರ ಪಾರ್ಲಿಮೆಂಟ್. ಮೊರಾರ್ಜಿ ದೇಸಾಯಿ ಪ್ರಧಾನಿ ಆದರು. ಆಗ ಲೋಕಸಭೆಯ ಸ್ಪೀಕರ್ ಆಗಿದ್ದ ನೀಲಂ ಸಂಜೀವ ರೆಡ್ಡಿ ಅವರು ರಾಷ್ಟ್ರಪತಿಯಾಗಿ ಅವಿರೋಧ ಆಯ್ಕೆ ಆದ ಕಾರಣ ಸ್ಪೀಕರ್ ಹುದ್ದೆ ಖಾಲಿ ಆಯ್ತು. ಆಗ ಆಡ್ವಾಣಿ ಅವರು ಸೂಚನೆ ಮಾಡಿ, ಎಲ್ಲರ ಸಹಮತಿಯನ್ನು ಪಡೆದು ಜಸ್ಟೀಸ್ ಹೆಗ್ಡೆಯವರು ಲೋಕಸಭೆಯ ಸ್ಪೀಕರ್ ಆದರು.
ಮುಂದಿನ ಮೂರು ವರ್ಷಗಳಲ್ಲಿ ಅವರು ಸ್ಪೀಕರ್ ಆಗಿ ನೀಡಿದ ಹಲವಾರು ರೂಲಿಂಗ್‌ಗಳು ತುಂಬಾನೇ ನಿಖರವಾಗಿ ಇದ್ದವು. ವಿರೋಧ ಪಕ್ಷಗಳು ತುಂಬಾ ಕ್ರಿಯಾಶೀಲವಾಗಿದ್ದರಿಂದ ಮತ್ತು ಎಲ್ಲ ಹಿರಿಯ ನಾಯಕರು ಉತ್ತಮ ಮಾತುಗಾರರು ಆಗಿದ್ದ ಕಾರಣ ಅದು ನನ್ನ ಮುಳ್ಳಿನ ಮೇಲೆ ನಡಿಗೆ ಆಗಿತ್ತು ಎಂದು ಜಸ್ಟೀಸ್ ಹೆಗ್ಡೆಯವರು ಹೇಳಿದ್ದಾರೆ.
ಲಾಲ್‌ಕೃಷ್ಣ ಆಡ್ವಾಣಿ, ವಾಜಪೇಯಿ, ಸೋಮನಾಥ್ ಚಟರ್ಜಿ, ಇಂದಿರಾ ಗಾಂಧಿ, ಮಧು ದಂಡವತೆ ಇಂತಹ ನಾಯಕರು ಸದನದಲ್ಲಿ ಇದ್ದರು. ವಾಜಪೇಯಿ, ಆಡ್ವಾಣಿ, ಪವರಫುಲ್ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕೂಡ ಸ್ಪೀಕರ್ ಅನುಮತಿ ಪಡೆದು ಮಾತಾಡುವಂತಹ ಪರಿಸ್ಥಿತಿ ಅಂದು ಇತ್ತು. ಅದು ಸ್ಪೀಕರ್ ಅವರಿಗೆ ಸಂವಿಧಾನವು ಕೊಟ್ಟ ಪವರ್. ಅವೆಲ್ಲ ಅಧಿಕಾರಗಳನ್ನು ಜಸ್ಟೀಸ್ ಹೆಗ್ಡೆಯವರು ಸಮರ್ಥವಾಗಿ ಬಳಸಿಕೊಂಡರು. ಅತ್ಯಂತ ಪ್ರಬಲ ಗೃಹ ಮಂತ್ರಿ ಆಗಿದ್ದ ಲಾಲ್‌ಕೃಷ್ಣ ಆಡ್ವಾಣಿ ಅವರು ಜಸ್ಟೀಸ್ ಹೆಗ್ಡೆಯವರ ಉತ್ತಮ ಗೆಳೆಯ ಆಗಿದ್ದರೂ ಲೋಕಸಭೆಯ ಒಳಗೆ ಸ್ಪೀಕರ್ ತಮ್ಮ ಆದೇಶಗಳಿಗೆ ಬದ್ಧತೆ ತೋರುತ್ತಿದ್ದರು ಮತ್ತು ಅಡ್ವಾಣಿ ಅವರು ಸ್ಪೀಕರ್ ಹೆಗ್ಡೆಯವರ ಗೆಳೆತನವನ್ನು ಎಂದಿಗೂ ದುರುಪಯೋಗ ಮಾಡಲಿಲ್ಲ. ಆಗಿನ ರಾಜಕೀಯ ನಾಯಕರೂ ಮೌಲ್ಯಾಧಾರಿತ ಆಗಿದ್ದರು ಮತ್ತು ಜಸ್ಟೀಸ್ ಹೆಗ್ಡೆಯವರು ಎಲ್ಲರಿಗಿಂತ ಮುಂದೆ ಇದ್ದರು.
ಮುಂದೆ ಮೊರಾರ್ಜಿ ಸರಕಾರ ವಿಸರ್ಜನೆ ಆಗಿ ಇಂದಿರಾ ಗಾಂಧಿ ಮತ್ತೆ ಪ್ರಧಾನಿ ಆದರು. ಸ್ಪೀಕರ್ ಆಗಿ ಜಸ್ಟೀಸ್ ಹೆಗ್ಡೆಯವರು ಮುಂದುವರೆಯಲಿ ಎಂದು ಆಗಿನ ಎಲ್ಲ ರಾಜಕೀಯ ಪಕ್ಷಗಳು ಅಭಿಪ್ರಾಯಪಟ್ಟವು. ಪ್ರಧಾನಿ ಇಂದಿರಾ ಗಾಂಧಿ ಅದೇ ಅಭಿಪ್ರಾಯ ಹೊಂದಿದ್ದರು. ಆದರೂ ಆತ್ಮಸಾಕ್ಷಿಗೆ ಒಪ್ಪುವುದಿಲ್ಲ ಎಂಬ ಕಾರಣಕ್ಕೆ ಹೆಗ್ಡೆಯವರು ಸ್ಪೀಕರ್ ಹುದ್ದೆಗೆ ರಾಜೀನಾಮೆ ಕೊಟ್ಟು ಹೊರಬಂದರು.
ಮುಂದೆ ಉಡುಪಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿದರೂ ಅವರಿಗೆ ಗೆಲ್ಲಲು ಸಾಧ್ಯವಾಗಲಿಲ್ಲ. ಅಲ್ಲಿಗೆ ಅವರು ರಾಜಕೀಯದಲ್ಲಿ ಆಸಕ್ತಿಯನ್ನು ಕಳೆದುಕೊಂಡರು ಮತ್ತು ಶಿಕ್ಷಣ ಹಾಗೂ ಸಾಮಾಜಿಕ ರಂಗದಲ್ಲಿ ಕ್ರಿಯಶೀಲರಾದರು.

ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಅರುಣೋದಯ

ಮುಂದೆ ತಮ್ಮ ಹೆಂಡತಿಯ ಊರಾದ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮಕ್ಕೆ ಬಂದು ವಾಸ ಮಾಡಲು ತೊಡಗಿದರು. ಅಲ್ಲಿ ಅವರು 1979ರಲ್ಲಿ ನಿಟ್ಟೆ ವಿದ್ಯಾಸಂಸ್ಥೆಯನ್ನು ಸ್ಥಾಪನೆ ಮಾಡಿದರು ಮತ್ತು ಅಲ್ಲಿಯೇ ನೆಲೆ ನಿಂತರು. ಅವರ ಆ ನಿರ್ಧಾರ ನಿಟ್ಟೆಯ ಭಾಗ್ಯದ ಬಾಗಿಲು ತೆರೆಯಲು ಕಾರಣವಾಯಿತು ಎಂದೇ ಹೇಳಬಹುದು. ಒಂದು ಸಣ್ಣ ಹೈಸ್ಕೂಲ್ ಮೂಲಕ ಆರಂಭ ಆಗಿದ್ದ ಈ ಸಂಸ್ಥೆ ಇಂದು ದೇಶದ ಅತ್ಯಂತ ಬಲಿಷ್ಠವಾದ ಯೂನಿವರ್ಸಿಟಿಯಾಗಿ ಬೆಳೆದಿದೆ. ಜಸ್ಟೀಸ್ ಹೆಗ್ಡೆಯವರ ದೂರದೃಷ್ಟಿ ಹಾಗೂ ಆಡಳಿತದ ಬಲದಿಂದ ಇದು ಸಾಧ್ಯವಾಯಿತು ಎಂದು ನನ್ನ ನಂಬಿಕೆ.
ಮುಂದಿನ ಹನ್ನೊಂದು ವರ್ಷ ಅವರು ನಿಟ್ಟೆಯ ವಿದ್ಯಾಸಂಸ್ಥೆಗಳ ಸ್ಫೂರ್ತಿಯ ಕೇಂದ್ರವೇ ಆಗಿದ್ದರು ಮತ್ತು ಮರಣದ ನಂತರವೂ ಪ್ರೇರಣೆಯಾಗಿ ನಿಂತರು.
ಇಂದು ನಿಟ್ಟೆ ವಿದ್ಯಾಸಂಸ್ಥೆ ಸ್ವಾಯತ್ತ ಯೂನಿವರ್ಸಿಟಿ ಆಗಿದ್ದು ಮೆಡಿಕಲ್, ಇಂಜಿನಿಯರಿಂಗ್, ಫಾರ್ಮಸಿ, ನಾನ್ ಟೆಕ್ನಿಕಲ್, ಟೆಕ್ನಿಕಲ್, ಆಡಳಿತ, ಐಟಿಐ, ನರ್ಸಿಂಗ್, ಪದವಿ ಕಾಲೇಜು, ಡೆಂಟಲ್ ಕಾಲೇಜು…ಮೊದಲಾದ 27 ವಿದ್ಯಾಸಂಸ್ಥೆಗಳನ್ನು, ನಾಲ್ಕು ಬಹು ದೊಡ್ಡದಾದ ಕ್ಯಾಂಪಸ್‌ಗಳನ್ನು ಹೊಂದಿದೆ. ವಿದೇಶದಲ್ಲೂ ನಿಟ್ಟೆ ವಿದ್ಯಾಸಂಸ್ಥೆಯ ಕ್ಯಾಂಪಸ್ ಇದೆ. 25 ಸಾವಿರದಷ್ಟು ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದಾರೆ. ನಿಟ್ಟೆ ವಿವಿಯು ಬಹಳ ದೊಡ್ಡ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯನ್ನು (ಕ್ಷೇಮಾ)ಹೊಂದಿದೆ. ಈಗ ಅವರ ಮಗ ಡಾ.ನಿಟ್ಟೆ ವಿನಯ್‌ ಹೆಗ್ಡೆಯವರು ಈ ವಿವಿಯ ಕುಲಾಧಿಪತಿ ಆಗಿದ್ದಾರೆ.
ಜಸ್ಟೀಸ್ ಕೆ. ಎಸ್. ಹೆಗ್ಡೆ ಅವರ ಇನ್ನೊಬ್ಬ ಪುತ್ರ ಜಸ್ಟೀಸ್ ಸಂತೋಷ್ ಹೆಗ್ಡೆ ಅವರು ಕೂಡ ತಮ್ಮ ತಂದೆಯ ಹಾಗೆ ಸುಪ್ರೀಂ ಕೋರ್ಟಿನ ಜಡ್ಜ್ ಆಗಿದ್ದು ಮುಂದೆ ಕರ್ನಾಟಕ ಲೋಕಾಯುಕ್ತದ ಮುಖ್ಯಸ್ಥರಾಗಿದ್ದು ದೇಶದಾದ್ಯಂತ ನ್ಯಾಯಪರವಾದ ಹಲವು ಹೋರಾಟಗಳನ್ನು ಲೀಡ್ ಮಾಡಿದ್ದಾರೆ.
1990ರಲ್ಲಿ ಜಸ್ಟೀಸ್ ಕೆ.ಎಸ್.ಹೆಗ್ಡೆ ಅವರು ನಮ್ಮನ್ನು ಅಗಲಿದರು. ಆಗ ಅವರ ಕುಟುಂಬ ಮತ್ತು ಹಿತೈಷಿಗಳು ಸೇರಿಕೊಂಡು ಅವರ ಹೆಸರಿನಲ್ಲಿ ಒಂದು ಟ್ರಸ್ಟ್ ಸ್ಥಾಪನೆ ಮಾಡಿ ಅದರ ಮೂಲಕ ಗ್ರಾಮಾಭಿವೃದ್ದಿ ಕಾರ್ಯ ಮತ್ತು ಶೈಕ್ಷಣಿಕ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಆರೋಗ್ಯ ಇದ್ದಾಗ ಆಡ್ವಾಣಿಯವರು ವರ್ಷಕ್ಕೊಮ್ಮೆ ನಿಟ್ಟೆಗೆ ಬಂದು ಜಸ್ಟೀಸ್ ಹೆಗ್ಡೆಯವರನ್ನು ತಪ್ಪದೇ ಭೇಟಿ ಮಾಡುತ್ತಿದ್ದರು.
ನಿಟ್ಟೆಯಲ್ಲಿ ಜಸ್ಟೀಸ್ ಕೆ.ಎಸ್. ಹೆಗ್ಡೆಯವರ ಮ್ಯೂಸಿಯಂ ಸ್ಥಾಪನೆ ಆಗಿದ್ದು, ಅಲ್ಲಿ ಅವರ ಹಲವು ಸಂಸ್ಮರಣದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಅವರು ಮಾಡಿದ ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಗಳ ಮೂಲಕ ಜಸ್ಟೀಸ್ ಕೆ. ಎಸ್. ಹೆಗ್ಡೆಯವರು ಇನ್ನೂ ನಮ್ಮ ನಡುವೆ ಇದ್ದಾರೆ ಎಂದು ನನಗೆ ಅನ್ನಿಸುತ್ತದೆ.
✒️ರಾಜೇಂದ್ರ ಭಟ್ ಕೆ.
ಜೇಸಿ ರಾಷ್ಟ್ರೀಯ ತರಬೇತಿದಾರರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top