ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕು ಸ್ಥಾಪನೆ ಮತ್ತು 94 ಸಿಸಿ ಹಕ್ಕುಪತ್ರ ವಿತರಣೆ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಭಾನುವಾರ ಚಂದಳಿಕೆ ಭಾರತ ಅಡಿಟೂರಿಯಂ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ವಿಟ್ಲದ ಸರ್ವತೋಮುಖ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಾಗಿದೆ. ವಿವಿಧ ಕಾಮಗಾರಿಗಳ ಉದ್ಘಾಟನೆಯೂ ನಡೆದಿದೆ. 94 ಸಿಸಿ ಹಕ್ಕುಪತ್ರ ವಿತರಿಸುವ ಮೂಲಕ ವಾಸದ ಜಮೀನಿಗೆ ತಾವೇ ಮಾಲಕರಾಗಿದ್ದೀರಿ ಎಂದ ಅವರು, 5 ವರ್ಷ ಅಧಿಕಾರದಲ್ಲಿ 2 ವರ್ಷ ಕೋವಿಡ್ ನಿಂದ ಅಭಿವೃದ್ಧಿ ಮಾಡಲು ಆಗಲಿಲ್ಲ. ಕೋವಿಡ್ ನಂತರದ ದಿನಗಳಲ್ಲಿ 39 ಕೋಟಿ ರೂಪಾಯಿ ಅನುದಾನ ಸುಮಾರು 2 ವರ್ಷದಲ್ಲಿ ಕೊಡುವ ಕೆಲಸ ಆಗಿದೆ ಎಂದರು.
ಯೋಜನೆಯ ಅನುದಾನ ನೇರವಾಗಿ ಫಲಾನುಭವಿಗಳ ಖಾತೆಗೆ : ಚನಿಲ ತಿಮ್ಮಪ್ಪ ಶೆಟ್ಟಿ
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಯಾವುದೇ ಯೋಜನೆಯ ಅನುದಾನ ನೇರವಾಗಿ ಪಲಾನುಭವಿಗಳ ಖಾತೆಗೆ ಬರುವ ವ್ಯವಸ್ಥೆ ಆಗಿದೆ ಎಂದರು.
ಕಾಯಕದ ನಾಯಕ ಸಂಜೀವ ಮಠಂದೂರು: ಹರಿಕೃಷ್ಣ ಬಂಟ್ವಾಳ್
ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಶಾಸಕ ಸಂಜೀವ ಮಠಂದೂರು ಅವರು ವಾಟ್ಸ್ ಆ್ಯಪ್ ನಾಯಕರಲ್ಲ, ಪೇಪರ್ ನಾಯಕಲ್ಲ. ಕಾಯಕವನ್ನೇ ನೆಚ್ಚಿಕೊಂಡ ನಾಯಕ. ಅವರು ತಮ್ಮ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳೇ ಅವರ ಕಾಯಕವನ್ನು ಹೇಳುತ್ತವೆ. ಆದರೂ ಎಲ್ಲಿಯೂ ತನ್ನ ಕೆಲಸಕ್ಕೆ ಪ್ರಚಾರವನ್ನು ಬಯಸಿದವರಲ್ಲ ಎಂದರು.
ಇದೇ ಸಂದರ್ಭ ಫಲಾನುಭವಿಗಳಿಗೆ 94 ಸಿಸಿ ಹಕ್ಕುಪತ್ರ ಹಾಗೂ ಕೃಷಿ ಸಲಕರಣೆಗಳನ್ನು ವಿತರಿಸಲಾಯಿತು.
ಪ್ರಮುಖರಾದ ಪುರುಷೋತ್ತಮ್ ಮುಂಗ್ಲಿಮನೆ, ಸಹಾಯಕ ಕೃಷಿ ನಿರ್ದೇಶಕಿ ವೀಣಾ ಕೆ.ಆರ್., ಗೃಹಮಂಡಳಿಯ ಕಾರ್ಯಪಾಲಕ ಅಭಿಯಂತರ ಮಂಜುಳಾ, ಬಂಟ್ವಾಳ ತಹಸೀಲ್ದಾರ್ ಸತೀಶ್ ಬಿ. ಕೂಡಲಗಿ, ಉಪತಹಸೀಲ್ದಾರ್ ವಿಜಯ ವಿಕ್ರಂ, ಪ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ್ ನಾಯಕ್, ಪ.ಪಂ. ಸದಸ್ಯರಾದ ರವಿ, ಲೋಕನಾಥ್ ಶೆಟ್ಟಿ, ವಿಟ್ಲ ಪ್ರಥಮ ದರ್ಜೆ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಡಾ. ಶ್ರೀಜ ಜೆ., ಶಂಕರ್ ಪಾಟಾಳಿ ಮತ್ತಿತರರು ಉಪಸ್ಥಿತರಿದ್ದರು.