ದೆಹಲಿ : ಭಾರತದಲ್ಲಿ ಪ್ರಜಾಪ್ರಭುತ್ವದ ಯಶಸ್ಸಿನಿಂದ ಕೆಲವರು ಕಂಗಾಲಾಗಿದ್ದಾರೆ. ಹೀಗಾಗಿ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಿರಂತರ ದಾಳಿ ನಡೆಸುತ್ತಿದ್ದಾರೆ ಎಂದು ಪ್ರದಾನಿ ನರೇಂದ್ರ ಮೋದಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಕುಟುಕಿದ್ದಾರೆ. ಲಂಡನ್‌ನಲ್ಲಿ ರಾಹುಲ್ ಗಾಂಧಿ ಭಾರತದಲ್ಲಿ ಪ್ರಜಾಪ್ರಭುತ್ವ ದಾಳಿಗೆ ತುತ್ತಾಗುತ್ತಿದೆ ಎಂದು ನೀಡಿರುವ ಹೇಳಿಕೆ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಮೋದಿ ತೀಕ್ಷ್ಣ ವಾಗ್ದಾಳಿ ನಡೆಸಿದರು.
ದೇಶ ಅತ್ಯಂತ ಆತ್ಮವಿಶ್ವಾಸದಲ್ಲಿ ಇರುವ ಸಂದರ್ಭದಲ್ಲಿ ಇಡೀ ವಿಶ್ವದ ಬೌದ್ಧಿಕ ಸಮುದಾಯ ಭಾರತದ ಬಗ್ಗೆ ಅಶಾಭಾವನೆ ಹೊಂದಿರುವಾಗ ನಿರಾಶವಾದದ ಬಗ್ಗೆ ಮಾತನಾಡುವ, ದೇಶವನ್ನು ಅತ್ಯಂತ ಕೀಳಾಗಿ ಬಿಂಬಿಸುವ ಮತ್ತು ದೇಶದ ಮನೋಬಲನ್ನು ಕುಗ್ಗಿಸುವಂತಹ ಕೆಲಸಗಳು ನಡೆಯುತ್ತಿವೆ ಎಂದು ಹೆಸರು ಹೇಳದೆಯೇ ರಾಹುಲ್ ಗಾಂಧಿ ವಿರುದ್ಧ ಕುಟುಕಿದರು.
ಏನಾದರೂ ಶುಭ ಕಾರ್ಯಗಳು ನಡೆಯುವಾಗ ಹಣೆಗೆ ಕಪ್ಪು ತಿಲಕ ಇಡುವ ಸಂಪ್ರದಾಯ ಇದೆ. ಹೀಗಾಗಿಯೇ ಇದೀಗ ದೇಶದಲ್ಲಿ ಹಲವು ಶುಭ ಘಟನೆಗಳು ನಡೆಯುತ್ತಿವೆ ಎನ್ನುವ ಕಾರಣಕ್ಕಾಗಿ ಕೆಲವರು ಕಪ್ಪು ತಿಲಕ ಇಡುವ ಹೊಣೆ ಹೊತ್ತುಕೊಂಡಿದ್ದಾರೆಂದು ವ್ಯಂಗ್ಯವಾಡಿದರು.
ಪ್ರಜಾಪ್ರಭುತ್ವದ ಸಾಮರ್ಥ್ಯವನ್ನು ಭಾರತ ಇಡೀ ವಿಶ್ವಕ್ಕೆ ಸಾಧಿಸಿ ತೋರಿಸಿದೆ. ಆದರೆ, ಈ ಯಶಸ್ಸು, ಕೆಲವರಿಗೆ ನೋವು ತಂದಿದೆ. ಹೀಗಾಗಿಯೇ ಅವರು ಅದರ ಮೇಲೆ ದಾಳಿ ನಡೆಸುತ್ತಿದ್ದಾರೆ. ಆದರೆ, ಇಂತಹ ದಾಳಿ ಗುರಿ ಮುಟ್ಟದು ಇದು. ಭಾರತದ ಯುಗ ಎಂದು ಇಡೀ ವಿಶ್ವ ಬಣ್ಣಿಸುತ್ತಿದೆ. ಇದಕ್ಕೆ ಕಾರಣವಾಗಿರುವುದು ಭರವಸೆಯ ಬದಲಾವಣೆ ಮತ್ತು ಸಾಧನೆ ಎಂದಿದ್ದಾರೆ.