ಪುತ್ತೂರು: ಶೈಕ್ಷಣಿಕ ಕಾರ್ಯಾಗಾರ ಹಾಗೂ ರಾಜ್ಯಮಟ್ಟದ ಕ್ರೀಡಾ ಸಾಧಕರಿಗೆ ಮತ್ತು ನಿವೃತ್ತ ದೈಹಿಕ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ನಗರದ ಮಾಯಿದೇ ದೇವುಸ್ ಚರ್ಚ್ ಸಭಾಂಗಣದಲ್ಲಿ ನಡೆಯಿತು.
ಶಾಸಕ ಸಂಜೀವ ಮಠಂದೂರು ಸನ್ಮಾನ ನೆರವೇರಿಸಿ ಮಾತನಾಡಿ, ವೃತ್ತಿ ಜೀವನದಲ್ಲಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದರೆ ನಿವೃತ್ತಿಯಾದ ಮೇಲೆ ಸಮಾಜ ಗುರತಿಸುವ, ಗೌರವಿಸುವ ಕೆಲಸ ಮಾಡುತ್ತದೆ. ಮುಂಬರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಾಕಷ್ಟು ಸವಾಲುಗಳಿದ್ದು, ಈ ಸವಾಲುಗಳನ್ನು ಸ್ವೀಕಾರ ಮಾಡಿಕೊಂಡು ಹೆಚ್ಚೆಚ್ಚು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದರು.
ಸುದಾನ ಶಾಲಾ ಸಂಚಾಲಕ ರೆ.ವಿಜಯ ಹಾರ್ವಿನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ದೈಹಿಕ ಸಾಮರ್ಥ್ಯದ ಆರೋಗ್ಯವನ್ನು ಕಾಪಾಡಿಕೊಳ್ಳದಿದ್ದರೆ ಕಲಿಕೆಯಲ್ಲಿ ಮುಂದುವರಿಯುವುದು ಕಷ್ಟ. ಆರೋಗ್ಯ ಕಾಪಾಡಿಕೊಳ್ಳಲು ಶಾಲೆಗಳಲ್ಲಿ ದೈಹಿಕ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕಾಗುತ್ತದೆ. ಈ ಮೂಲಕ ದೈಹಿಕ ಆರೋಗ್ಯದ ಕುರಿತು ತಿಳಿಸುವಳಿಕೆ ಮೂಡಿಸಿದಾಗ ಆರೋಗ್ಯ ಸದೃಢಗೊಳ್ಳುತ್ತದೆ ಎಂದರು.
ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ಲ್ಲಿ ಪಾಯಸ್ ಮಾತನಾಡಿ, ದೈಹಿಖ ಶಿಕ್ಷಣ ಶಿಕ್ಷಕರು ಏಕಾಗ್ರತೆ, ಶಿಶ್ತಿ ಅಳವಡಿಸಿಕೊಂಡು ಸರ್ವಾಂಗೀಣವಾಗಿ ಮಕ್ಕಳಿಗೆ ಕಲಿಸಿಕೊಡುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ 2022-23ನೇ ಸಾಲಿನಲ್ಲಿ ವಿಕಲಚೇತನ ಕ್ರೀಡಾಪಟುಗಳನ್ನು ಗುರುತಿಸಿ ಅಭಿನಂದನೆ ಸಲ್ಲಿಸಲಾಯಿತು. 2022-23ನೇ ಸಾಲಿನ ಕ್ರೀಡಾಪಟುಗಳನ್ನು ಅಭಿನಂದಿಸಿ, ಪ್ರೋತ್ಸಾಹ ಧನ ವಿತರಿಸಲಾಯಿತು. ಸಂಘಕ್ಕೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ಶಾಸಕ ಸಂಜೀವ ಮಠಂದೂರು, ಸುದಾನ ಶಾಲಾ ಸಂಚಾಲಕ ರೆ.ವಿಜಯ ಹಾರ್ವಿನ್, ಸಾಂದೀಪನಿ ಸಂಸ್ಥೆಯ ಭಾಸ್ಕರ ಆಚಾರ್ ಹಿಂದಾರು, ರಾಜ್ಯಮಟ್ಟದ ಹಿರಿಯ ಕ್ರೀಡಾಪಟು ಪ್ರಫುಲ್ಲ ರೈ, ಚಂದ್ರಶೇಖರ್ ರೈ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಶಿಕ್ಷಕ ಶಿಕ್ಷಣ ಸಂಘದ ಅಧ್ಯಕ್ಷ ಸೀತಾರಾಮ ಗೌಡ, ಗ್ರೇಡ್-2 ಜಿಲ್ಲಾಧ್ಯಕ್ಷ ಸುರೇಶ್ ಕುಮಾರ್, ಸಂತ ವಿಕ್ಟರ್ ಪ್ರೌಢಶಾಲಾ ಮುಖ್ಯ ಶಿಕ್ಷಕಿ ರೋಸ್ಲಿನ್ ಲೋಬೋ ಉಪಸ್ಥಿತರಿದ್ದರು. ಶಿಕ್ಷಕಿ ವಿಜಯಪ್ರಭು ಪ್ರಾರ್ಥಿಸಿದರು. ದೈಹಿಕ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಮಾಮಚ್ಚನ್ ಎಂ. ಸ್ವಾಗತಿಸಿದರು. ಕೋಶಾಧಿಕಾರಿ ಮೋಹನ್ ಪೆರಿಯಡ್ಕ ವಂದಿಸಿದರು. ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿ ಶ್ರೀಲತಾ ವರದಿ ವಾಚಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರವೀಣ ರೈ, ವನಿತಾ ಕಾರ್ಯಕ್ರಮದ ನಿರೂಪಿಸಿದರು.
ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪುತ್ತೂರು ಹಾಗೂ ಕಡಬ ತಾಲೂಕು ಘಟಕದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.