ಬೆಂಗಳೂರು : ಕಾಂಗ್ರೆಸ್ ಚುನಾವಣಾ ಸಮಿತಿ (ಸಿಇಸಿ) ಶುಕ್ರವಾರ ವಿಧಾನಸಭೆ ಚುನಾವಣೆಗೆ 124 ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಭ್ಯರ್ಥಿಗಳ ಪಟ್ಟಿ ಬಹುತೇಕ ಅಂತಿಮಗೊಂಡಿದೆ.
ಕಾಪುವಿನಿಂದ ವಿನಯ್ ಕುಮಾರ್ ಸೊರಕೆ, ಉಳ್ಳಾಲದಿಂದ ಯು. ಟಿ. ಖಾದರ್ ಮತ್ತು ಬೈಂದೂರಿನಿಂದ ಗೋಪಾಲ ಪೂಜಾರಿಯವರಿಗೆ ಟಿಕೆಟ್ ಸಿಗುವುದು ಖಾತರಿಯಾಗಿದೆ. ಆದರೆ ಗೊಂದಲದ ಗೂಡಾಗಿರುವ ಕಾರ್ಕಳ ಕ್ಷೇತ್ರದ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಹೈಕಮಾಂಡಿನಿಂದಲೂ ಸಾಧ್ಯವಾಗಿಲ್ಲ.
ಮೋಹನ್ ಪ್ರಕಾಶ್ ನೇತೃತ್ವದ ಸ್ಕ್ರೀನಿಂಗ್ ಕಮಿಟಿಯು ಪ್ರಸ್ತಾಪಿಸಿದ ಬಹುತೇಕ ಎಲ್ಲ 71 ಹಾಲಿ ಶಾಸಕರ ಹೆಸರುಗಳನ್ನು ಫೈನಲ್ ಮಾಡಲಾಗಿದ್ದು, 2018ರ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋತವರಿಗೆ ಮತ್ತೆ ಮಣೆ ಹಾಕಲಾಗಿದೆ.
ತಂದೆ-ಮಕ್ಕಳ ಕಾಂಬಿನೇಷನ್ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಅವರ ಹೆಸರುಗಳು ಮೊದಲ ಪಟ್ಟಿಯಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ. ತಂದೆ, ಮಗ, ಮಗಳು ಎಲ್ಲ ಪಕ್ಷಗಳಲ್ಲೂ ಇದ್ದಾರೆ, ಹಾಗೆಯೇ ನಮ್ಮ ಪಕ್ಷದಲ್ಲಿಯೂ ಇದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಾಕಷ್ಟು ಸುಳಿವು ನೀಡಿದ್ದಾರೆ.
ಸೋಮವಾರ ಅಥವಾ ಯುಗಾದಿ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಳಗಾವಿಗೆ ಭೇಟಿ ನೀಡಿದ ನಂತರ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಕೊನೇ ಗಳಿಗೆಯಲ್ಲಿ ಪಕ್ಷಕ್ಕೆ ಸೇರಲು ಸಿದ್ಧರಾಗಿರುವ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವ ಬಗ್ಗೆಯೂ ಚರ್ಚಿಸಲಾಗಿದೆ.
ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಪುತ್ರಿ ಹಾಗೂ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್, ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಪುತ್ರ ಸುನೀಲ್ ಬೋಸ್, ಸಿ.ಎಲ್.ಪಿ.ನಾಯಕ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ,ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಹಾಗೂ ಮಾಜಿ ಸಚಿವೆ ಮೋಟಮ್ಮ ಅವರ ಪುತ್ರಿ ನಯನಾ ಜವ್ಹರ್ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.
ಕೊರಟಗೆರೆಯಲ್ಲಿ ಗೆಲುವು ಕಷ್ಟ ಎಂದು ಭಾವಿಸಿದರೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರಿಗೆ ಸಿ.ವಿ.ರಾಮನ್ ನಗರ ಕ್ಷೇತ್ರವನ್ನು, ಎಚ್.ಸಿ.ಮಹದೇವಪ್ಪ ಅವರಿಗೆ ಬೆಂಗಳೂರಿನ ಮಹದೇವಪುರ ಅಥವಾ ಪುಲಿಕೇಶಿನಗರ ಕ್ಷೇತ್ರಗಳಿಗೆ ಟಿಕೆಟ್ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಬೆಂಗಳೂರಿನಿಂದ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಪಕ್ಷದ ತಂತ್ರದ ಭಾಗವಾಗಿದೆ. ಮುನಿಯಪ್ಪ ಅವರಿಗೆ ದೇವನಹಳ್ಳಿ ಟಿಕೆಟ್ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.