ಬೆಂಗಳೂರು :ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವ ಸಿದ್ದರಾಮಯ್ಯ ಇಚ್ಚೆಗೆ ಕಾಂಗ್ರೆಸ್ ಹೈಕಮಾಂಡ್ ಸಮ್ಮತಿಸಿಲ್ಲ ಎನ್ನಲಾಗಿದೆ. ನಿಮಗೆ ಕೋಲಾರ ಸೂಕ್ತ ಅಲ್ಲ, ವರುಣಾದಿಂದಲೇ ಸ್ಪರ್ಧಿಸಿ. ನಾಮಪತ್ರ ಹಾಕಿ ಬೇರೆ ಕಡೆ ಪ್ರಚಾರ ಮಾಡಿ ಅಂತ ಸ್ವತಃ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಅವರೇ ಸಿದ್ದರಾಮಯ್ಯಗೆ ಸೂಚನೆ ನೀಡಿದ್ದಾರೆ ಎಂದು ಮೂಲವೊಂದು ತಿಳಿಸಿದೆ.
ರಾಹುಲ್ ಗಾಂಧಿ ಅವರ ಸೂಚನೆಗೆ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿ ಪಕ್ಷದ ನಾಯಕರ ಜೊತೆಗೆ ಹೋಗಿ ಚರ್ಚೆ ಮಾಡ್ತೇನೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ನಿನ್ನೆಯ ಸಭೆಯಲ್ಲೇ ನನ್ನ ಟಿಕೆಟ್ ಕ್ಲಿಯರ್ ಮಾಡಿಲ್ಲ ಎಂದು ನಿನ್ನೆ ದಿಲ್ಲಿಯಲ್ಲಿ ಸಿದ್ದರಾಮಯ್ಯ ಹೇಳಿರುವುದು ಕೋಲಾರದಲ್ಲಿ ನಿಲ್ಲುವುದಿಲ್ಲ ಎಂಬುದರ ಪರೋಕ್ಷ ಸೂಚನೆ ಎನ್ನಲಾಗಿದೆ. ನನ್ನ ಸ್ಪರ್ಧೆಯ ವಿಚಾರವನ್ನ ನಾನು ಹೈಕಮಾಂಡ್ಗೆ ಬಿಟ್ಟಿದ್ದೇನೆ, ಅವರು ಏನು ತೀರ್ಮಾನ ಮಾಡ್ತಾರೋ ಮಾಡ್ಲಿ ಅಂತ ಸ್ಪಷ್ಟಪಡಿಸಿದ್ದಾರೆ.
ಕೋಲಾರದಲ್ಲಿ ಸಿದ್ದರಾಮಯ್ಯ ಗೆಲ್ಲುವ ಸಾಧ್ಯತೆ ಕಡಿಮೆ ಇದೆ ಎಂದು ತಿಳಿದುಬಂದ ಮೇಲೆ ಹೈಕಮಾಂಡ್ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ಅವರಿಗೆ ವರುಣಾ ಕ್ಷೇತ್ರವನ್ನು ಸೂಚಿಸಿದೆ. ಕಾಂಗ್ರೆಸ್ ಆಂತರಿಕ ಸಮೀಕ್ಷೆಯಲ್ಲಿ ಗೆಲುವಿನ ಸಾಧ್ಯತೆ ಕಡಿಮೆ ಎಂಬ ಅಂಶ ವ್ಯಕ್ತವಾಗಿತ್ತು.ಗಿತ್ತು. ನಾಯಕರ ನಡುವಿನ ಮುಸುಕಿನ ಗುದ್ದಾಟ ಸಿದ್ದರಾಮಯ್ಯ ಗೆಲುವಿಗೆ ತೊಡಕಾಗಿತ್ತು. ವರುಣಾ ಕ್ಷೇತ್ರ ಸೇಫ್ ಎಂಬುದಾಗಿ ಸಮೀಕ್ಷೆ ಹೇಳಿತ್ತು. ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಕೂಡ ಅದನ್ನೇ ಹೇಳಿದೆ.