ಬೆಂಗಳೂರು : ಕರ್ನಾಟಕದಲ್ಲಿ ರಾಷ್ಟ್ರಧ್ವಜ ಸುಡುವುದು ಸೇರಿದಂತೆ ಎರಡು ಡಜನ್‌ಗೂ ಹೆಚ್ಚು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವ ಇಬ್ಬರು ಇಸ್ಲಾಮಿಕ್ ಸ್ಟೇಟ್ ಕಾರ್ಯಕರ್ತರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಚಾರ್ಜ್‌ಶೀಟ್ ಸಲ್ಲಿಸಿದೆ.
ಶಿವಮೊಗ್ಗದ ಮಾಜ್ ಮುನೀರ್ ಅಹ್ಮದ್ (23) ಮತ್ತು ಸೈಯದ್ ಯಾಸಿನ್ (22) ವಿರುದ್ಧ ಭಾರತೀಯ ದಂಡ ಸಂಹಿತೆ, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ರಾಷ್ಟ್ರೀಯ ಗೌರವಕ್ಕೆ ಅವಮಾನ ಮಾಡುವುದನ್ನು ತಡೆಯುವ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ವಿಶೇಷ ನ್ಯಾಯಾಲಯ ಆರೋಪಪಟ್ಟಿ ಸಲ್ಲಿಸಿದೆ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ. ಶಿವಮೊಗ್ಗ, ಮಂಗಳೂರು ಸೇರಿ ವಿವಿಧೆಡೆ ಉಗ್ರ ಕೃತ್ಯಗಳನ್ನು ಎಸಗಿ ಭೀತಿ ಮೂಡಿಸಲು ಅವರು ಸಂಚು ಮಾಡಿದ್ದರು ಎಂದು ಆರೋಪಿಸಲಾಗಿದೆ.
ವಿಧ್ವಂಸಕ ಕೃತ್ಯಗಳನ್ನು ನಡೆಸುವ ಮೂಲಕ ನಿಷೇಧಿತ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಗುಂಪಿನ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸಲು ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಸೈಯದ್ ಯಾಸಿನ್ ಶಿವಮೊಗ್ಗದ ನದಿ ದಂಡೆಯಲ್ಲಿ ಪ್ರಾಯೋಗಿಕವಾಗಿ ಬಾಂಬ್ ಸ್ಫೋಟಿಸಿದ್ದ. ರಾಷ್ಟ್ರಧ್ವಜ ಸುಟ್ಟು ಹಾಕಿ ಭಾರತ ವಿರೋಧಿ ಮನಸ್ಥಿತಿಯ ವೀಡಿಯೊ ರೆಕಾರ್ಡ್ ಮಾಡಿದ್ದಾನೆ. ಇದಕ್ಕೆ ಪ್ರತಿಯಾಗಿ ವಿದೇಶಿ ಉಗ್ರಗಾಮಿ ಸಂಸ್ಥೆಗಳಿಂದ ಕ್ರಿಪ್ಟೋ ಕರೆನ್ಸಿ ಮೂಲಕ ಹಣ ಪಡೆಯುತ್ತಿದ್ದ ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.
ಇದೇ ವೇಳೆ ರಾಷ್ಟ್ರೀಯ ತನಿಖಾ ಸಂಸ್ಥೆ ಕೇರಳ ಮತ್ತು ತಮಿಳುನಾಡಿನಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಒಟ್ಟು 68 ನಾಯಕರು, ಕಾರ್ಯಕರ್ತರು ಮತ್ತು ಸದಸ್ಯರ ವಿರುದ್ಧ ಶುಕ್ರವಾರ ಎರಡು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದೆ.
ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಮತ್ತು 2047ರ ವೇಳೆಗೆ ಭಾರತದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸಲು ಹಣವನ್ನು ಸಂಗ್ರಹಿಸುತ್ತಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.
ಈ ತಿಂಗಳು ಪಿಎಫ್‌ಐ ಕಾರ್ಯಕರ್ತರ ವಿರುದ್ಧ ಎನ್‌ಐಎ ಸಲ್ಲಿಸಿದ ಒಟ್ಟು ಚಾರ್ಜ್‌ಶೀಟ್‌ಗಳ ಸಂಖ್ಯೆ ನಾಲ್ಕಕ್ಕೆ ಏರಿದೆ. ಇಂತಹ ಮೊದಲ ಆರೋಪಪಟ್ಟಿಯನ್ನು ಮಾರ್ಚ್ 13 ರಂದು ಜೈಪುರದಲ್ಲಿ ಮತ್ತು ಎರಡನೆಯದನ್ನು ಮಾರ್ಚ್ 16 ರಂದು ಹೈದರಾಬಾದ್‌ನಲ್ಲಿ ಸಲ್ಲಿಸಲಾಗಿತ್ತು.