ರಾಜ್ಯಕ್ಕೆ ಕೇಂದ್ರದಿಂದ ನಿಯಂತ್ರಣ ನಿರ್ದೇಶನ
ದೆಹಲಿ : ದೇಶದಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಾದ ನಿಗಾ ವಹಿಸಲು ಮತ್ತು ಕೋವಿಡ್ ಹರಡುವುದನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಮಿಳುನಾಡು, ಕೇರಳ, ಕರ್ನಾಟಕ ಮತ್ತು ತೆಲಂಗಾಣ ಸೇರಿದಂತೆ ಆರು ರಾಜ್ಯಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ.
ಕೇಂದ್ರ ಆರೋಗ್ಯ ಸಚಿವಾಲಯ, ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಕೋವಿಡ್ ಪರೀಕ್ಷೆ ಹೆಚ್ಚಿಸುವಂತೆ, ಹೊಸ ಕೋವಿಡ್ ಪ್ರಕರಣಗಳನ್ನು ಮತ್ತು ಕ್ಲಸ್ಟರ್‌ಗಳ ಮೇಲ್ವಿಚಾರಣೆ ಮಾಡುವಂತೆ ಮತ್ತು ಎಚ್3ಎನ್2 ತರಹದ ಅನಾರೋಗ್ಯ ಮತ್ತು ತೀವ್ರ ಉಸಿರಾಟದ ಸಮಸ್ಯೆ ಇರುವವರ ಮೇಲೆ ನಿಗಾ ಇಡುವಂತೆ ನಿರ್ದೇಶಿಸಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಆರು ರಾಜ್ಯಗಳಿಗೆ ಪತ್ರ ಬರೆದಿದ್ದು, ಕಳೆದ ಕೆಲವು ತಿಂಗಳಲ್ಲಿ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಕುಸಿತವಾಗಿತ್ತು. ಆದರೆ. ಕಳೆದ ಕೆಲವು ದಿನಗಳಿಂದ ಕೋವಿಡ್ 3,264 ಪ್ರಕರಣ ವರದಿಯಾಗಿದೆ.
ಕೆಲವು ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿದ್ದು, ಸ್ಥಳೀಯವಾಗಿ ಸೋಂಕು ಹರಡಿರುವ ಸಾಧ್ಯತೆ ಇದೆ. ಹೀಗಾಗಿ ಅಪಾಯದ ಮೌಲ್ಯ ಮಾಪನ ಆಧಾರಿತ ವಿಧಾನವನ್ನು ಅನುಸರಿಸಿ, ಈ ವರೆಗೂ ಸೋಂಕಿನ ವಿರುದ್ಧದ ಹೋರಾಟದಿಂದ ಆದ ಲಾಭವನ್ನು ಕಳೆದುಕೊಳ್ಳದೆ ಸೋಂಕನ್ನು ನಿಯಂತ್ರಿಸಬೇಕಾಗಿದೆ ಎಂದು ರಾಜೇಶ್ ಭೂಷಣ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.