ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ.10 ರಿಂದ ನಡೆಯುವ ಜಾತ್ರೋತ್ಸವಕ್ಕೆ ಪೂರ್ವಭಾವಿಯಾಗಿ ಬ್ರಹ್ಮರಥ ಮಂದಿರದಿಂದ ಬ್ರಹ್ಮರಥವನ್ನು ರಥಬೀದಿಗೆ ತಂದು ನಿಲ್ಲಿಸುವ ಮುಹೂರ್ತ ಗುರುವಾರ ನಡೆಯಿತು. ಈ ಮೂಲಕ ಪುತ್ತೂರು ಜಾತ್ರೋತ್ಸವಕ್ಕೆ ಮುನ್ಸೂಚನೆ ನೀಡಲಾಯಿತು.
ಪ್ರತೀ ವರ್ಷದಂತೆ ಬಿಲ್ವಪತ್ರೆ ಭೂಸ್ಪರ್ಶ ಮಾಡುವ ಮೂಲಕ ಸೂಚಿಸುವಂತೆ ಈ ಬಾರಿಯೂ ಬಿಲ್ವಪತ್ರೆ ಭೂಸ್ಪರ್ಶ ಮಾಡಿದೆ.
ಬೆಳಿಗ್ಗೆ ದೇವಸ್ಥಾನದ ಪ್ರಧಾನ ಅರ್ಚಕ ವೆ.ಮೂ. ವಸಂತ ಕೆದಿಲಾಯರು ಬ್ರಹ್ಮರಥಕ್ಕೆ ಪುಷ್ಪ, ಗಂಧ, ಬಿಲ್ವಪತ್ರೆ ಸಮರ್ಪಣೆ ಮಾಡಿ ವಿಜೃಂಭಣೆಯಿಂದ ಜಾತ್ರೆ ನಡೆಯುವಂತೆ ಪ್ರಾರ್ಥಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸದಸ್ಯರಾದ ಬಿ.ಐತ್ತಪ್ಪ ನಾಯ್ಕ, ಶೇಖರ್ ನಾರಾವಿ, ರವೀಂದ್ರನಾಥ ರೈ, ರಾಮಚಂದ್ರ ಕಾಮತ್, ರಾಮದಾಸ್ ಗೌಡ, ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಸಿಬ್ಬಂದಿ ಉಮೇಶ್ ಬಲ್ನಾಡು ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.
ಬಳಿಕ ಕ್ರೇನ್ ಮೂಲಕ ದೇವಸ್ಥಾನದ ರಥಬೀದಿಗೆ ಬ್ರಹ್ಮರಥವನ್ನು ತಂದು ನಿಲ್ಲಿಸಲಾಯಿತು.ಇನ್ನು ಮಾ.17 ರಂದು ನಡೆಯುವ ಬ್ರಹ್ಮರಥೋತ್ಸವಕ್ಕೆ ಬ್ರಹ್ಮರಥವನ್ನು ಅಣಿಗೊಳಿಸುವುದೊಂದೇ ಬಾಕಿ.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯೆ ಬಿ.ಕೆ.ವೀಣಾ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಸಹಾಯಕ ಪದ್ಮನಾಭ, ನಿತ್ಯ ಕರಸೇವಕ ಗಣೇಶ್ ಆಚಾರ್ಯ, ಮತ್ತಿತರರು ಉಪಸ್ಥಿತರಿದ್ದರು.