ಪುತ್ತೂರು: ಲಯನ್ಸ್ ಕ್ಲಬ್ ಪುತ್ತೂರು, ರೋಹಿಣಿ ಹೊಲಿಗೆ ಆರ್ಟ್ & ಕ್ರಾಫ್ಟ್ ತರಬೇತಿ ಕೇಂದ್ರದ ಆಶ್ರಯದಲ್ಲಿ ಬುಧವಾರ ಬೆಳಿಗ್ಗೆ ಲಯನ್ಸ್ ಸೇವಾ ಮಂದಿರದಲ್ಲಿ ಕೃತಕ ಹೂವುಗಳ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾ ಅವರು ಕೃತಕ ಹೂವುಗಳ ಪ್ರದರ್ಶನಕ್ಕೆ ಚಾಲನೆ ನೀಡಿ, ಶುಭಹಾರೈಸಿದರು.
ಪುತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷ ಕೇಶವ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷ ಶಾಂತಿ ಹೆಗಡೆ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಗಣೇಶ್ ಶೆಟ್ಟಿ ಕೆ., ಜಿಲ್ಲಾ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಅಧ್ಯಕ್ಷೆ ನಯನಾ ರೈ ಪುತ್ತೂರು ಉಪಸ್ಥಿತರಿದ್ದರು.
ಇದೇ ಸಂದರ್ಭ ಕೃತಕ ಹೂವುಗಳನ್ನು ತಯಾರಿಸಿದ ರೋಹಿಣಿ ಹೊಲಿಗೆ ಕೇಂದ್ರ, ಆರ್ಟ್ & ಕ್ರಾಫ್ಟ್ ತರಬೇತಿ ಕೇಂದ್ರದ ವ್ಯವಸ್ಥಾಪಕಿ ರೋಹಿಣಿ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ವೀಕ್ಷಣೆ:
ಕೃತಕ ಹೂವುಗಳ ಪ್ರದರ್ಶನದಲ್ಲಿ ವಿವಿಧ ನಮೂನೆಯ ಹೂವುಗಳು ಇವೆ. ಬಳಸಿ ಎಸೆದ ಅನುಪಯುಕ್ತ ವಸ್ತುಗಳಿಗೆ ಹೂವುಗಳ ರೂಪ ನೀಡಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ. ಈ ಹೂವುಗಳನ್ನು ಜೋಡಿಸಿಟ್ಟಿರುವ ಕುಂಡಗಳು ಕಲಾತ್ಮಕವಾಗಿವೆ. ಮಾರ್ಚ್ 16ರಂದು ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಸಾರ್ವಜನಿಕರಿಗೆ ವೀಕ್ಷಣೆಗೆ ಲಭ್ಯವಿದ್ದು, ಮಾರ್ಚ್ 17ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಶಾಲಾ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.