ದೆಹಲಿ: ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿಯಾಗುತ್ತಿದೆ ಎಂದು ಬ್ರಿಟನ್ ಭಾಷಣದಲ್ಲಿನ ರಾಹುಲ್ ಗಾಂಧಿ ಹೇಳಿಕೆ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಕಾಂಗ್ರೆಸ್ ನ ವಿದೇಶ ಸಂಪರ್ಕ ಮುಖ್ಯಸ್ಥರಾಗಿರುವ ಸ್ಯಾಮ್ ಪಿತ್ರೋಡಾ ರಾಹುಲ್ ಗಾಂಧಿ ಸಮರ್ಥನೆಗೆ ಮುಂದಾಗಿದ್ದಾರೆ.
ರಾಹುಲ್ ಗಾಂಧಿ ಅವರು ನೆರವಿವಾಗಿ ಎಂದಿಗೂ ವಿದೇಶಗಳನ್ನು ಆಹ್ವಾನಿಸಿಲ್ಲ. ಅವರು ಸುಳ್ಳು ಆಧಾರಿತ, ತಪ್ಪು ಮಾಹಿತಿಯನ್ನೊಳಗೊಂಡ ಸಂಘಟಿತ ವೈಯಕ್ತಿಕ ದಾಳಿಗಳಿಗೆ ಗುರಿಯಾಗಿದ್ದಾರೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಅವರು ಬ್ರಿಟನ್ ನಲ್ಲಿ ನೀಡಿದ್ದ ಹೇಳಿಕೆ ಸಂಸತ್ ನಲ್ಲೂ ಗದ್ದಲ ಉಂಟುಮಾಡಿತ್ತು. ಪರಿಣಾಮ ಬಜೆಟ್ ಅಧಿವೇಶದ ಉತ್ತರಾರ್ಧ ಕಲಾಪದ ಮೊದಲ ಎರಡು ದಿನಗಳು ವ್ಯರ್ಥವಾಗಿತ್ತು. ಕೇಂದ್ರ ಸಚಿವರ ಗುಂಪು ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ರಾಹುಲ್ ಗಾಂಧಿ ಕ್ಷಮೆ ಯಾಚನೆಗೆ ಪಟ್ಟು ಹಿಡಿದಿದ್ದರೆ, ಇದನ್ನು ಎದುರಿಸಲು ಕಾಂಗ್ರೆಸ್ ಅದಾನಿ ವಿಷಯವಾಗಿ ಜಂಟಿ ಸದನ ಸಮಿತಿ ತನಿಖೆಯ ಅಸ್ತ್ರವನ್ನು ಪ್ರಯೋಗಿಸಿದೆ
ರಾಹುಲ್ ಗಾಂಧಿ ಅವರ ಬ್ರಿಟನ್ ಪ್ರವಾಸ ಹಾಗೂ ಸಂವಾದ ಕಾರ್ಯಕ್ರಮಗಳಲ್ಲಿ ಅವರ ಜೊತೆಗೇ ಇದ್ದ ಕಾಂಗ್ರೆಸ್ ನ ವಿದೇಶ ಸಂಪರ್ಕ ಮುಖ್ಯಸ್ಥರಾಗಿರುವ ಸ್ಯಾಮ್ ಪಿತ್ರೋಡಾ ಆಡಳಿತ ಪಕ್ಷದ ನಾಯಕರಿಂದ ರಾಹುಲ್ ಗಾಂಧಿ ವಿರುದ್ಧ ನಡೆಯುತ್ತಿರುವ ವಾಗ್ದಾಳಿಗಳಿಗೆ ಪ್ರತಿಯಾಗಿ ತಮ್ಮ ನಾಯಕನನ್ನು ಸಮರ್ಥಿಸಿಕೊಳ್ಳುವ ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ.
ನಾನು ಓರ್ವ ತಾರ್ಕಿಕ, ತರ್ಕಬದ್ಧ, ಮುಕ್ತ ಮನಸ್ಸು, ಕಣ್ಣುಗಳು ಮತ್ತು ಕಿವಿಗಳನ್ನು ಹೊಂದಿರುವ ಭಾರತೀಯ ವೃತ್ತಿಪರನಾಗಿ ಆ ಕಾರ್ಯಕ್ರಮದಲ್ಲಿದ್ದೆ ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದು, ಮಾಧ್ಯಮಗಳೊಂದಿಗೆ ಸೇರಿ ಚುನಾಯಿತ ನಾಯಕರ ಮೂಲಕ ಸುಳ್ಳು ಮತ್ತು ತಪ್ಪು ಮಾಹಿತಿಯ ಆಧಾರದ ಮೇಲೆ ಸುಸಂಘಟಿತ ವೈಯಕ್ತಿಕ ದಾಳಿ ನಡೆಸುವುದರ ಅರ್ಥವೇನು? ಇದೇನಾ ಭಾರತದ ಪ್ರಜಾಪ್ರಭುತ್ವವೆಂದರೆ? ರಾಜಕೀಯ ಸಂವಾದ, ಚರ್ಚೆಗಳಲ್ಲಿ ಸಭ್ಯತೆ ಉಳಿದಿದೆಯೇ? ಎಂದು ಪಿತ್ರೋಡಾ ಪ್ರಶ್ನಿಸಿದ್ದಾರೆ.