ಬೆಂಗಳೂರು: ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಭಾರಿ ಮುಖಭಂಗವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮತ್ತು ರೌಡಿಶೀಟರ್ ಫೈಟರ್ ರವಿ ಎದುರು ನಿಂತು ಪರಸ್ಪರ ಕೈ ಜೋಡಿಸಿ ಶುಭಾಶಯ ಕೋರುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿರೋಧ ಪಕ್ಷಗಳು ಇದನ್ನೇ ದೊಡ್ಡ ವಿಷಯವನ್ನಾಗಿಸಿಕೊಂಡು, ಬಿಜೆಪಿ ಮಾತ್ರವಲ್ಲ ಪ್ರಧಾನಿ ಮೇಲೂ ವಾಗ್ದಾಳಿ ನಡೆಸುತ್ತಿವೆ.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ವೇಳೆ ಪ್ರಧಾನಿ ಅವರನ್ನು ಸ್ವಾಗತಿಸಲು ರೌಡಿ ಶೀಟರ್‌ಗೆ ಅವಕಾಶ ನೀಡಿದ್ದಕ್ಕಾಗಿ ಕರ್ನಾಟಕ ಕಾಂಗ್ರೆಸ್ ಘಟಕವು ಆಡಳಿತಾರೂಢ ಬಿಜೆಪಿ ವಿರುದ್ಧ ಮಂಗಳವಾರ ವಾಗ್ದಾಳಿ ಮುಂದುವರಿಸಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿಹಾಯ್ದಿರುವ ಕಾಂಗ್ರೆಸ್, ‘ವಿಶ್ವದ ಎಲ್ಲವನ್ನೂ ತಿಳಿದಿರುವ ಸರ್ವ ಜ್ಞಾನಿ’ಗೆ ಪೈಟರ್ ರವಿ ಬಗ್ಗೆ ಮಾಹಿತಿ ಇಲ್ಲ ಎಂದರೆ ಹೇಗೆ?. ಯಾರೆಲ್ಲಾ ತಮಗೆ ಸ್ವಾಗತ ಕೋರುತ್ತಾರೆ ಎಂಬ ಪಟ್ಟಿಯನ್ನು ಪ್ರಧಾನಿ ಮೋದಿ ಮೊದಲೇ ಪಡೆಯುತ್ತಾರೆ. ಅಲ್ಲವೇ? ಎಂದು ಬಿಜೆಪಿಯನ್ನು ಲೇವಡಿ ಮಾಡಿದೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೇಳಿಕೆ ಬಿಜೆಪಿ ರೌಡಿ ಮೋರ್ಚಾಕ್ಕೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ಆರೋಪಿಸಿದೆ. ಬಿಜೆಪಿಯ ಮೂಲಗಳ ಪ್ರಕಾರ, ಪಕ್ಷದ ವರಿಷ್ಠರು ಈ ಬೆಳವಣಿಗೆಯಿಂದ ಅಸಮಾಧಾನಗೊಂಡಿದ್ದಾರೆ ಮತ್ತು ಈ ವಿಷಯದ ಬಗ್ಗೆ ವರದಿ ಕೇಳಿದ್ದಾರೆ. ವಿವಾದಿತ ವ್ಯಕ್ತಿಯೊಬ್ಬರಿಗೆ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಅವಕಾಶ ಮಾಡಿಕೊಟ್ಟು, ಪ್ರಧಾನಿಗೆ ಮುಜುಗರ ಉಂಟುಮಾಡಿರುವುದಕ್ಕೆ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿದೆ ಎನ್ನಲಾಗಿದೆ.