ಪುತ್ತೂರು: ಮಾಸಾಶನ ಪಡೆಯುವ ಫಲಾನುಭವಿಗಳಿಗೆ ಮಾಹಿತಿ ಮತ್ತು ಕಾರ್ಯಾಗಾರ ಸಭೆ ಆರ್ಯಾಪು ಗ್ರಾಮ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮಂಗಳೂರು, ಆರ್ಯಾಪು ಗ್ರಾಮ ಪಂಚಾಯತ್ ಸಹಯೋಗದಲ್ಲಿ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ಮನಸ್ವಿನಿ, ವಿಧವಾ ವೇತನದ ಮಾಹಿತಿ ಕಾರ್ಯಾಗಾರ ನಡೆಯಿತು. ಕಾರ್ಯಾಗಾರದಲ್ಲಿ ಗ್ರಾಮ ಪಂಚಾಯತ್ ಸದಸ್ಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ಆಶಾ ಕಾರ್ಯಕರ್ತೆಯರಿಗೆ ಹಾಗೂ ಹಿರಿಯ ನಾಗರಿಕರಿಗೆ ಮಾಹಿತಿ ನೀಡಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಪುತ್ತೂರು ಎಫ್.ಎಲ್.ಸಿ. ಅಮೂಲ್ಯ ಸಾಕ್ಷರತಾ ಕೇಂದ್ರದ ಗೀತಾ ವಿಜಯ್ ಅವರು ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಆರ್ಯಾಪು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪೂರ್ಣಿಮಾ ರೈ ಅಧ್ಯಕ್ಷತೆ ವಹಿಸಿದ್ದರು. ಆರ್ಯಾಪು ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋನಪ್ಪ ಕೆ., ವಿಶೇಷ ಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಲಕ್ಷ್ಮೀಕಾಂತ್ ಹೆಗ್ಡೆ, ಆರ್ಯಾಪು ಎನ್.ಆರ್.ಎಲ್.ಎಂ. ಸಂಜೀವಿನಿ ಸರೋವರ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ ನಯನ ರೈ ಉಪಸ್ಥಿತರಿದ್ದರು. ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವಿದ್ಯಾರ್ಥಿನಿಯರಾದ ಹರೀಷ್ಮ ಕೆ.ಎಚ್. ಸ್ವಾಗತಿಸಿ, ವೈಷ್ಣವಿ. ವಂದಿಸಿದರು. ನವ್ಯಶ್ರೀ ಪಿ.ಜಿ. ಕಾರ್ಯಕ್ರಮ ನಿರೂಪಿಸಿದರು.