ಬೆಂಗಳೂರು: ಮಾ. 13 ರ ರಾತ್ರಿ ಎಸ್‌ಎಂವಿಟಿ ರೈಲು ನಿಲ್ದಾಣದಲ್ಲಿ ಪ್ಲಾಸ್ಟಿಕ್ ಡ್ರಮ್‌ನಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಇದು ಎರಡು ತಿಂಗಳಲ್ಲಿ ಪತ್ತೆಯಾದ ಈ ಮಾದರಿಯ ಮೂರನೇ ಪ್ರಕರಣ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಹಿಳೆಯರನ್ನು ಹತ್ತ್ಯೆ ಮಾಡುವ ಸೀರಿಯಲ್ ಕಿಲ್ಲರ್ ಇದ್ದಾನೆಯೇ ಎನ್ನುವ ಅನುಮಾನ ಕಾಡತೊಡಗಿದೆ. ಎರಡು ತಿಂಗಳ ಹಿಂದೆ ಬೆಂಗಳೂರಿನ ಯಶವಂತಪುರ ಹಾಗೂ ಬೈಯಪ್ಪನಹಳ್ಳಿ ರೈಲ್ವೇ ಸ್ಟೇಷನ್ ಬಳಿ ಡ್ರಮ್ ಹಾಗೂ ಚೀಲಗಳಲ್ಲಿ ಮಹಿಳೆಯರ ಶವಗಳು ಪತ್ತೆಯಾಗಿದ್ದವು. ಇದರ ಬೆನ್ನಲ್ಲೇ ಮತ್ತೊಂದು ಮಹಿಳೆಯ ಶವ ಬೈಯಪ್ಪನಹಳ್ಳಿ ರೈಲ್ವೇ ಸ್ಟೇಷನ್ ಬಳಿ ಕೊಳೆತ ಸ್ಥಿತಿಯಲ್ಲಿ ಕಂಡಿದೆ.
ಸೋಮವಾರ ಸಂಜೆ 7ಗಂಟೆಗೆ ರೈಲ್ವೇ ನಿಲ್ದಾಣದ ಎಂಟ್ರಿ ಗೇಟ್ ಬಳಿ ಇದ್ದ ಡ್ರಮ್ ನಿಂದ ವಾಸನೆ ಬರುತ್ತಿದ್ದು, ಅನುಮಾನಗೊಂಡ ಆಟೋ ಚಾಲಕರೊಬ್ಬರು ಗಮನಿಸಿದಾಗ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೂವರು ಹಂತಕರು ಮಹಿಳೆಯನ್ನು ಕೊಂದು ಡ್ರಮ್ ನಲ್ಲಿ ತುಂಬಿ ರೈಲು ನಿಲ್ದಾಣದಲ್ಲಿ ಬಿಟ್ಟಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಬೈಯಪ್ಪನಹಳ್ಳಿ ರೈಲ್ವೇ ಸ್ಟೇಷನ್ ಬಳಿ ಮಹಿಳೆ ಶವ ಪತ್ತೆಯಾಗಿದೆ. ಹಂತಕರು ಬೆಳಗ್ಗೆ 10-11 ಗಂಟೆ ಸುಮಾರಿಗೆ ಡ್ರಮ್ ತಂದಿಟ್ಟು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಾಗಾದರೆ ಬೆಂಗಳೂರಿನಲ್ಲಿ ಸರಣಿ ಹಂತಕರು ಮತ್ತೆ ಸಕ್ರಿಯರಾಗಿದ್ದಾರೆಯೇ ಎಂಬ ಅನುಮಾನಗಳು ಕಾಡುತ್ತಿವೆ. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.