ಮಂಗಳೂರು : ಆಂಧ್ರಪ್ರದೇಶದಿಂದ ಬೆಂಗಳೂರು ಮೂಲಕ ಮಂಗಳೂರಿಗೆ ನಿಷೇದಿತ ಮಾದಕ ವಸ್ತು ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ದಸ್ತಗಿರಿ ಮಾಡಿ 13 ಕೆ ಜಿ ಗಾಂಜಾವನ್ನು ಮಂಗಳೂರು ಸಿಸಿಬಿ ಪೊಲೀಸರು ಸ್ವಾಧೀನಪಡಿಸಿಕೊಂಡಿರುತ್ತಾರೆ.
ಶನಿವಾರ ಸಂಜೆ ವೇಳೆ ಕಂಕನಾಡಿ ರೈಲ್ವೆ ಸ್ಟೇಷನ್‌ನ ಅಳಪೆ ಪರಿಸರದಲ್ಲಿ ನಿಷೇಧಿತ ಗಾಂಜಾ ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ.ಎ. ಹೆಗಡೆ ರವರ ನೇತೃತ್ವದ ಸಿಸಿಬಿ ಪೊಲೀಸರು ಗಾಂಜಾವನ್ನು ಹೊಂದಿದ್ದ ಪಾಣೆಮಂಗಳೂರಿನ ಅಬ್ದುಲ್ ಸಾಧಿಕ್ (35), ಮತ್ತು , ಬೆಳ್ತಂಗಡಿ ಕಕ್ಕಿಂಜೆ ಗ್ರಾಮದ ನವಾಜ್(24) ಎಂಬವರನ್ನು ಬಂಧಿಸಿದೆ.
ಅವರಿಂದ ಸುಮಾರು 4 ಲ.ರೂ. ಬೆಲೆಬಾಳುವ 13 ಕೆಜಿ ಗಾಂಜಾ, ಮೊಬೈಲ್ 2 ಫೋನ್ 5610 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಅಬ್ದುಲ್ ಸಾದಿಕ್ ವಿರುದ್ಧ ಈ ಹಿಂದೆ ಮೈಸೂರು ನಗರದ ಲಷ್ಕರ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ 2022 ರಲ್ಲಿ ಗಾಂಜಾ ಸಾಗಾಟಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.