ಪುತ್ತೂರು: ಕಾವು: ನವೋದಯ ಒಕ್ಕೂಟದ ಎಲ್ಲಾ ಗುಂಪುಗಳ ಪುರುಷ ಸದಸ್ಯರಿಗೆ ಮಂಗಳೂರು ನವೋದಯ ಟ್ರಸ್ಟ್ ವತಿಯಿಂದ ಸಮವಸ್ತ್ರ ವಿತರಣಾ ಕಾರ್ಯಕ್ರಮ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಿವಸದನ ಸಭಾಂಗಣದಲ್ಲಿ ನಡೆಯಿತು.
ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡತ್ತಾಯ ಸಮವಸ್ತ್ರ ವಿತರಿಸಿ ಮಾತನಾಡಿ, ಎಲ್ಲಾ ಗುಂಪುಗಳು ಪಾರದರ್ಶಕವಾಗಿ ಹಣಕಾಸಿನ ವ್ಯವಹಾರ ಮಾಡುವ ಮೂಲಕ ಸ್ವಾವಲಂಬಿಯ ಕಡೆ ಬರಬೇಕು. ಒಂದೂ ಕಲೆಯಿಲ್ಲದ ಬಿಳಿ ವಸ್ತ್ರವೂ ಹೇಗೆ ಶುಭ್ರತೆಯನ್ನು ತೋರಿಸುತ್ತದೆಯೋ ಹಾಗೆ ನವೋದಯ ಸದಸ್ಯರ ವ್ಯವಹಾರವೂ ಕಪ್ಪು ಚುಕ್ಕೆಯಿಲ್ಲದ ಬಿಳಿ ವಸ್ತ್ರದಂತಿರಬೇಕು ಎಂದರು.
ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೇಶವ ಮೂರ್ತಿ ಮಾತನಾಡಿ, ನವೋದಯ ಸದಸ್ಯರ ಬೇಡಿಕೆಗಳಿಗೆ ನಾವು ಸದಾ ಸ್ಪಂದಿಸುತ್ತಿದ್ದೇವೆ. ಸದಸ್ಯರು ಕೂಡ ಸಂಘದಲ್ಲಿ ಹೆಚ್ಚಿನ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂದರು.
ನವೋದಯ ಟ್ರಸ್ಟ್ನ ಪುತ್ತೂರು ವಲಯ ಮೇಲ್ವೀಚಾರಕ ಚಂದ್ರಶೇಖರ್ ಮಾತನಾಡಿ, ಟ್ರಸ್ಟ್ ನಿಂದ ಪ್ರತೀ ಐದು ವರ್ಷಕ್ಕೊಮ್ಮೆ ನವೋದಯ ಸದಸ್ಯರಿಗೆ ಸಮವಸ್ತ್ರವನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ರಾಜೇಂದ್ರ ಕುಮಾರ್ ಅವರ ಅಪೇಕ್ಷೆಯಂತೆ ಎಲ್ಲಾ ಪ್ರಾಥಮಿಕ ಸಹಕಾರಿ ಸಂಘಗಳ ಪಾಲುದಾರಿಕೆಯೊಂದಿಗೆ ವಿತರಿಸಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ಕಾವು ನವೋದಯ ಒಕ್ಕೂಟದ ಅಧ್ಯಕ್ಷರಾದ ಸುಬ್ರಾಯ ಗೌಡ,ಕಾವು ವಲಯ ಪ್ರೇರಕಿ ಮಾಧವಿಯವರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಸುಮಾರು 104 ಪುರುಷ ಸದಸ್ಯರಿಗೆ ಸಮವಸ್ತ್ರ ವಿತರಿಸಲಾಯಿತು. ಒಕ್ಕೂಟದ ಉಪಾಧ್ಯಕ್ಷೆ ಶ್ರೀಮತಿ ಸುಮತಿ,ಕೋಶಾಧಿಕಾರಿ ಇಬ್ರಾಹಿಂ, ಗೌರವಾಧ್ಯಕ್ಷರಾದ ಅಮ್ಮುಪೂಂಜ ಸೇರಿದಂತೆ ಎಲ್ಲಾ ಗುಂಪಿನ ಪ್ರತಿನಿಧಿಗಳು ಭಾಗವಹಿಸಿದ್ದರು.
ಮಮತ ರಾವ್ ಪ್ರಾರ್ಥನೆ ಹಾಡಿದರು. ಸುಬ್ರಾಯ ಗೌಡ ಸ್ವಾಗತಿಸಿ, ಮಾಧವಿ ವಂದಿಸಿದರು. ಚಿದಾನಂದ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.