ಪುತ್ತೂರು : ಪುತ್ತೂರಿನ ಕೆಮ್ಮಿಂಜೆಯಲ್ಲಿರುವ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಗೇರು ದಿನೋತ್ಸವ-2023 ವನ್ನು ಆಚರಿಸಲಾಯಿತು.
ಮುಖ್ಯ ಅಥಿತಿಗಳಾಗಿ ಗದಗ ಜಿಲ್ಲಾ ಗೇರು ಬೆಳೆಗಾರರ ಸಂಘದ ಅಧ್ಯಕ್ಷ ಗುರುನಾಥ ಆರ್. ಓದುಗೌಡರ್ ಮಾತನಾಡಿ, ಕೃಷಿಕರು ತಾಯಿಗೆ ಸಮಾನ. ತಾಯಿಯ ಕುಂದು ಕೊರತೆಗಳನ್ನು ನಿವಾರಿಸುವಲ್ಲಿ ಕೃಷಿ ವಿಜ್ಞಾನಿಗಳು ಮಾಡಬೇಕಾದ ಕೆಲಸದ ಬಗ್ಗೆ ತಿಳಿಸಿದರು. ರೈತರ ಹೊಲಗಳಿಗೆ ಬೇಟಿ ನೀಡಿ ಖಾಲಿ ಇರುವ ಪ್ರದೇಶದಲ್ಲಿ ವಿಸ್ತರಣಾ ಚಟುವಟಿಕೆಗಳನ್ನು ಕೈಗೊಂಡು ಪರಿಸರಕ್ಕೆ ಹೊಂದುವ ವಿವಿಧ ತಳಿಗಳನ್ನು ಬಿಡುಗಡೆ ಮಾಡಬೇಕೆಂದು ಸಲಹೆ ನೀಡಿದ ಅವರು, ಗೇರು ಕೃಷಿಕರ ಉತ್ಪಾದನೆಗಳಿಗೆ ಮೌಲ್ಯವರ್ದಕ ಬೆಲೆ ಸಿಗುವಂತೆ ಮಾಡಿ ಒಂದು ಸಮಗ್ರ ಕೃಷಿ ವಿಧಾನವನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಅತಿಥಿಗಳಾಗಿ ಕಾಸರಗೋಡು ಸಿಪಿಆರ್ ಐ ನಿರ್ದೇಶಕ ಡಾ. ಕೆ.ಬಿ. ಹೆಬ್ಬಾರ್, ಗೇರು ಕೃಷಿಯಲ್ಲಿ ಆಗಬೇಕಾದ ಸುಧಾರಣೆಯ ಬಗ್ಗೆ ಮಾಹಿತಿ ನೀಡಿ, ತೋಟಗಾರಿಕಾ ಬೆಳೆಗಳಾದ ತೆಂಗು, ಅಡಿಕೆ, ಕೊಕ್ಕೋಗಳಿಗೆ ಹೋಲಿಸಿದರೆ ಗೇರು ಬೆಳೆಯಲ್ಲಿ ಖರ್ಚು ತುಂಬಾ ಕಡಿಮೆ ಹಾಗೂ ಲಾಭ ಹೆಚ್ಚು. ಇದನ್ನು ಯಾವ ಪ್ರದೇಶದಲ್ಲಿಯೂ ಅದರ ಹವಾಗುಣಕ್ಕೆ ಸರಿಯಾಗಿ ಬೆಳೆಯಬಹುದು. ಹವಾಗುಣ ಬದಲಾವಣೆಯಿಂದಾಗುವ ಕೀಟ ಬಾಧೆಯಂತಹ ಸಮಸ್ಯೆ ಪರಿಹರಿಸಿದರೆ ಗೇರು ಕೃಷಿ ಒಂದು ವರದಾನ ಎಂದು ತಿಳಿಸಿದರು.
ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಟಿ.ಜೆ. ರಮೇಶ್, ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ಬಳಸಿಕೊಂಡು ರೈತರು ತಮ್ಮ ಆದಾಯವನ್ನು ದ್ವಿಗುಣಗೊಳಿಸಬೇಕೆಂದು ಕರೆ ನೀಡಿದರು. ಕೃಷಿ ಸಂಶೋಧಕರು ಸಂಶೋಧನೆಯ ಫಲಿತಾಂಶ ರೈತರಿಗೆ ತಲುಪಿಸಿ ಆಧುನಿಕ ತಂತ್ರಜ್ಞಾನಗಳ ಸದುಪಯೋಗ ಮಾಡುವಲ್ಲಿ ಕೆಲಸ ಮಾಡಬೇಕೆಂದು ತಿಳಿಸಿದರು.
ಸಂಸ್ಥೆಯ ನಿರ್ದೇಶಕ ಡಾ. ಜೆ.ಡಿ. ದಿನಕರ ಅಡಿಗ ಅಧ್ಯಕ್ಷತೆ ವಹಿಸಿ, ರೈತರು ಗೇರು ಬೆಳೆಯಲ್ಲಿ ನಂಬಿಕೆ ಇರಿಸಿ. ಸಂಸ್ಥೆಯಿಂದ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನ ಹಾಗೂ ಕೊಡಮಾಡುವ ತರಭೇತಿಗಳು ರೈತರ ಆದಾಯ ದ್ವಿಗುಣಗೊಳಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನೇತ್ರ ಉಭಯ” ಎನ್ನುವ ಹೊಸ ಗೇರು ತಳಿಯನ್ನು ಬಿಡುಗಡೆ ಮಾಡಲಾಯಿತು. ಕ್ಯಾಶ್ಯೂ ಪ್ರೊಟೆಕ್ಟ್ ಆಪ್ ಎನ್ನುವ ಕೃತಕ ಬುದ್ಧಿಮತ್ತೆ ಆಧಾರಿತ ಮೊಬೈಲ್ ಆಪ್ ಬಿಡುಗಡೆಗೊಳಿಸಲಾಯಿತು. ರಾ ಕ್ಯಾಶ್ಯೂ ಪ್ರೊಸೆಸಿಂಸ್ ಆಂಡ್ ವ್ಯಾಲ್ಯೂ ಏಡೆಡ್ ಪ್ರಾಡಕ್ಟ್ಸ್ ಆಫ್ ಕ್ಯಾಶ್ಯೂ ಆಪಲ್ ಎಂಬ ತರಬೇತಿ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು. ಪ್ರಗತಿಪರ ಗೇರು ಕೃಷಿಕರಾದ ಕಾಸರಗೋಡಿನ ವಿಶ್ವಕೇಶವ ಕುರುವೇರಿ ಗೇರು ಸಂಸ್ಕರಣೆಯಲ್ಲಿ ತಮ್ಮ ಅನುಭವ ಹಾಗೂ ವೆಂಕಟೇಶ್ ನಂದಿತಳೆ, ನೀಚಡಿ ಅವರು ಅತಿಸಾಂದ್ರ ಪದ್ಧತಿ ಮತ್ತು ಗೇರು ನರ್ಸರಿ ಉದ್ಯಮದಲ್ಲಿ ತಮ್ಮ ಅನುಭವ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಈ ಇಬ್ಬರೂ ಸಾಧಕರನ್ನು ಸನ್ಮಾನಿಸಲಾಯಿತು.
ಗೇರು ಬೆಳೆಯ ಕುರಿತಂತೆ ಸಂಸ್ಥೆ ಅಭಿವೃದ್ಧಿ ಪಡಿಸಿದ ವಿವಿಧ ತಂತ್ರಜ್ಞಾನಗಳು, ಗೇರು ಹಣ್ಣಿನ ಮೌಲ್ಯವರ್ಧಿತ ಉತ್ಪನ್ನಗಳು ಹಾಗೂ ಸಂಸ್ಥೆಯಿಂದ ಪ್ರಕಟಿಸಲಾದ ಪ್ರಕಟಣೆಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು. 150 ಕ್ಕೂ ಅಧಿಕ ಗೇರು ಕೃಷಿಕರು ಪ್ರದರ್ಶನಾ ಮಳಿಗೆಗಳಿಗೆ ಬೇಟಿ ನೀಡಿದರು. ಸಾಧಕ ಗೇರು ಕೃಷಿಕರಿಗೆ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಯಿತು. ವಿಜ್ಞಾನಿ ಡಾ.ಜಿ.ಎನ್.ಮಂಜೇಶ್, ವಂದಿಸಿದರು. ಸಂಸ್ಥೆಯ ಮುಖ್ಯ ತಾಂತ್ರಿಕ ಅಧಿಕಾರಿ ಪ್ರಕಾಶ್ ಜಿ. ಭಟ್ ಕಾರ್ಯಕ್ರಮ ನಿರೂಪಿಸಿದರು.