ಎರಡು ದಿನದಲ್ಲಿ ಹಲವು ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ತನ್ನ ತವರು ರಾಜ್ಯವಾದ ಗುಜರಾತಿನಲ್ಲಿ ಎರಡು ದಿನಗಳಲ್ಲಿ ಬರೋಬ್ಬರಿ 82,000 ಕೋಟಿ ರೂ. ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.
ಇಂದಿನಿಂದ ಮೋದಿ ಎರಡು ದಿನಗಳ ಗುಜರಾತ್ ಪ್ರವಾಸ ಕೈಗೊಳ್ಳಲಿದ್ದು, ಈ ಸಂದರ್ಭದಲ್ಲಿ ಹಲವು ಬೃಹತ್ ಯೋಜನೆಗಳ ಲೋಕಾರ್ಪಣೆ, ಶಂಕುಸ್ಥಾಪನೆ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಆಪರೇಷನ್ ಸಿಂಧೂರ್ ಬಳಿಕ ಮೊದಲು ಬಾರಿ ಮೋದಿ ತವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ.
ದಾಹೋಡ್‌ನಲ್ಲಿ ರೈಲು ಇಂಜಿನ್ ಉತ್ಪಾದನೆ ಘಟಕ ಸೇರಿದಂತೆ ರೈಲ್ವೆಯ ಸುಮಾರು 24,000 ಕೋ. ರೂ. ಮೊತ್ತದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ವಂದೇ ಭಾರತ್ ರೈಲು, ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿ 21,000 ಕೋ. ರೂ. ಮೊತ್ತದ ಇನ್ನೊಂದು ರೈಲ್ವೆ ಯೋಜನೆ ಉದ್ಘಾಟನೆ ಮೋದಿ ಕಾರ್ಯಕ್ರಮದಲ್ಲಿ ಸೇರಿದೆ.
ಗುಜರಾತಿನ ಭುಜ್ ಜಿಲ್ಲೆಯಲ್ಲಿ 53,000 ಕೋ. ರೂ. ಮೊತ್ತದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇದರಲ್ಲಿ ಕಾಂಡ್ಲಾ ಬಂದರು, ಸೋಲಾರ್ ಘಟಕ, ಪವರ್ ಟ್ರಾನ್ಸ್‌ಮಿಷನ್ ಸಿಸ್ಟಮ್ ಮತ್ತಿತರ ಯೋಜನೆಗಳು ಸೇರಿವೆ. ಅನೇಕ ರಸ್ತೆ ಮತ್ತು ಮೂಲಸೌಕರ್ಯ ಯೋಜನೆಗಳನ್ನು ರಾಜ್ಯದ ವಿವಿಧೆಡೆ ಲೋಕಾರ್ಪಣೆಗೊಳಿಸಲಿದ್ದಾರೆ.
ಪ್ರಧಾನಿಯಾದ ಬಳಿಕ ಮೋದಿ ತನ್ನ ತವರು ರಾಜ್ಯಕ್ಕೆ ನೀಡಿರುವ ಬಹುದೊಡ್ಡ ಕೊಡುಗೆ ಇದು ಎನ್ನಲಾಗಿದೆ. ಎರಡು ದಿನದಲ್ಲಿ ಗುಜರಾತಿನಲ್ಲಿ ಮೋದಿ ಹಲವು ಸಮಾವೇಶ ಮತ್ತು ಸಭಾ ಕರ್ಯಕ್ರಮಗಳಲ್ಲೂ ಭಾಗವಹಿಸಲಿದ್ದಾರೆ. ಇವುಗಳಲ್ಲಿ ಪಹಲ್ಗಾಮ್ ಉಗ್ರ ದಾಳಿ, ಆಪರೇಷನ್ ಸಿಂಧೂರ್ ಮತ್ತು ನಂತರದ ಬೆಳವಣಿಗೆಗಳ ಕುರಿತು ವಿಪಕ್ಷಗಳು ತನ್ನ ಮೇಲೆ ಮಾಡಿರುವ ಟೀಕೆಗಳಿಗೆ ಉತ್ತರ ನೀಡುವ ನಿರೀಕ್ಷೆ ಇದೆ.