16 ವರ್ಷಗಳ ಬಳಿಕ ಬೇಗನೇ ಶುರುವಾಗುತ್ತಿದೆ ಮಳೆಗಾಲ
ಮಂಗಳೂರು : ಕರಾವಳಿಯಾದ್ಯಂತ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿರುವಂತೆಯೇ ಅಧಿಕೃತವಾಗಿ ಮುಂಗಾರು ಆಗಮನಕ್ಕೂ ವೇದಿಕೆ ಸಿದ್ಧವಾಗಿದೆ. ಹವಾಮಾನ ಇಲಾಖೆ ನೀಡಿದ ಹೊಸ ಮುನ್ಸೂಚನೆಯಂತೆ ಇನ್ನು 24 ತಾಸಿನೊಳಗೆ ಮುಂಗಾರು ಕೇರಳ ಪ್ರವೇಶಿಸಲಿದೆ. ಕಳೆದ 16 ವರ್ಷಗಳ ಬಳಿಕ ಮುಂಗಾರು ಇಷ್ಟು ಬೇಗ ಬರುತ್ತಿರುವುದು ಇದೇ ಮೊದಲು.
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಒತ್ತಡ ಕುಸಿತ ಪರಿಸ್ಥಿತಿಯಿಂದಾಗಿ ಕಳೆದ 5-6 ದಿನಗಳಿಂದ ಕೇರಳ, ಕರ್ನಾಟಕ ಸೇರಿದಂತೆ ಪಶ್ಚಿಮ ಕರಾವಳಿಯಾದ್ಯಂತ ಮುಂಗಾರು ಪೂರ್ವ ಅಬ್ಬರಿಸುತ್ತಿದ್ದು, ಮಳೆಗಾಲದ ಪರಿಸ್ಥಿತಿಯೇ ಉಂಟಾಗಿದೆ. ಅಲ್ಲಲ್ಲಿ ನೆರೆ ಸಹಿತ ಪ್ರಕೃತಿ ವಿಕೋಪಗಳು ಉಂಟಾಗಿವೆ. ಇದರ ನಡುವೆಯೇ ಮುಂಗಾರು ಮಳೆಯೂ ಬರಲಿರುವುದರಿಂದ ಈ ಸಲ ಮೇ ತಿಂಗಳ ಮಧ್ಯಭಾಗದಲ್ಲೇ ಮಳೆಗಾಲ ಶುರುವಾದಂತಾಗಿದೆ.
2001 ಮತ್ತು 2009ರಲ್ಲಿ ಮುಂಗಾರು ಮೇ 23ಕ್ಕೆ ಅಗಮನವಾಗಿತ್ತು. ಕಳೆದ ವರ್ಷ ಜೂನ್ ಮೊದಲ ವಾರ ಆರಂಭವಾಗಿದ್ದರೆ ಅದಕ್ಕೂ ಹಿಂದಿನ ವರ್ಷ ಜೂನ್ ಮಧ್ಯಭಾಗದಲ್ಲಿ ಆರಂಭವಾಗಿ ನೀರಿಗಾಗಿ ಹಾಹಾಕಾರ ಉಂಟಾಗಿತ್ತು. ಜೂನ್ ಮೊದಲ ವಾರ, ಬಹುತೇಕ 1ರಿಂದ 3 ತಾರೀಕಿನೊಳಗೆ ಮುಂಗಾರು ಕೇರಳ ಪ್ರವೇಶವಾಗುವುದು ವಾಡಿಕೆ. ಹವಾಮಾನ ಇಲಾಖೆಯ ಮುನ್ಸೂಚನೆಯಲ್ಲಿ ಒಂದರಿಂದ ಮೂರು ದಿನಗಳ ವ್ಯತ್ಯಯವಷ್ಟೇ ಇರುತ್ತದೆ. 1918ರಲ್ಲಿ ಮೇ 11ರಂದೇ ಮುಂಗಾರು ಬಂದದ್ದು ಇಷ್ಟರತನಕದ ದಾಖಲೆ. 1972ರಲ್ಲಿ ಜೂ.18ರಂದು ಮುಂಗಾರು ಬಂದದ್ದು ತಡವಾಗಿ ಮಳೆಗಾಲ ಶುರುವಾದ ದಾಖಲೆ.
ಈ ವರ್ಷ ಉತ್ತಮ ಮಳೆಯಾಗಲಿದೆ. ಶೇ.99-100ರಷ್ಟು ಮಳೆ ನಿರೀಕ್ಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.